ಬದಿಯಡ್ಕ: ಸಮಾಜದ ಕ್ಲೇಶಗಳು, ಕೆಟ್ಟ ಸಂಪ್ರದಾಯಗಳು, ದುಶ್ಚಟಗಳು ದೂರವಾಗಬೇಕಾದರೆ ಜನರಲ್ಲಿ ಧಾರ್ಮಿಕ ಪ್ರಜ್ಞೆಗಳು ಮೂಡಿಬರಬೇಕು. ಮಠ ಮಂದಿರಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬೆರೆತಾಗ ಜನರಲ್ಲಿ ಧಾರ್ಮಿಕ ಶ್ರದ್ಧೆ ಉಂಟಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನವನ್ನು ನೀಡಿದರು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಬದಿಯಡ್ಕ ಪೇಟೆಯ ಪೆರ್ಮುಖ ಎಂಬಲ್ಲಿ ಗಿರಿಪ್ರದೇಶದಲ್ಲಿ ನೂತನ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ನಿರ್ಮಾಣದ ಪ್ರಯುಕ್ತ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಭಾನುವಾರ ನಡೆದ ನಿಧಿ ಸಮರ್ಪಣಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶದ ವಿವಿಧ ಕಡೆಗಳಲ್ಲಿ ಮಂದಿರಗಳು ಧರ್ಮದ ಅರಿವನ್ನು ಮೂಡಿಸಲು ಮುಂದೆ ಬರುತ್ತಿರುವುದು ಸಂತಸದ ವಿಚಾರವಾಗಿದೆ. ಮಂದಿರ ನಿರ್ಮಾಣಕ್ಕಾಗಿ `ಶ್ರೀನಿಧಿಯ ಕೂಪನ್ ಇಂದು ಬಿಡುಗಡೆಗೊಂಡಿದೆ. ಧರ್ಮಕಾರ್ಯಕ್ಕಾಗಿ ಭಕ್ತಾದಿಗಳು ನಿರಂತರ ದೇಣಿಗೆಯನ್ನು ಸಮರ್ಪಣೆ ಮಾಡಬೇಕು. ಧಾರ್ಮಿಕ ಪ್ರಜ್ಞೆಯನ್ನು ಸದಾ ಬೆಳೆಸಿಕೊಳ್ಳಬೇಕು ಎಂದರು.
ಧಾರ್ಮಿಕ ಮುಂದಾಳು ಎಸ್.ಎನ್.ಮಯ್ಯ ಬದಿಯಡ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಕøತಿ ಪರಂಪರೆಯನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಬೇಕು. ಎಲ್ಲರ ಒಗ್ಗಟ್ಟಿನ ಪರಿಶ್ರಮವಿದ್ದರೆ ಮಂದಿರ ನಿರ್ಮಾಣಕಾರ್ಯವು ಅತಿಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು. ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಅವರು ನಿಧಿ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿ ಮಾನಸಿಕವಾಗಿಯೂ ಶಾರೀರಿಕವಾಗಿಯೂ ನಾವು ಮಂದಿರ ನಿರ್ಮಾಣಕಾರ್ಯದಲ್ಲಿ ತೊಡಗಬೇಕಿದೆ. ಇದಕ್ಕಾಗಿ ಈ ಊರಿನ ಭಕ್ತಾದಿಗಳು ತಮ್ಮ ಆದಾಯದ ಒಂದಂಶವನ್ನು ಸಮರ್ಪಣೆ ಮಾಡಿ ಮಂದಿರ ನಿರ್ಮಾಣಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆಯಿತ್ತರು. ಸಾಮಾಜಿಕ ಮುಂದಾಳು ತಿರುಪತಿಕುಮಾರ ಭಟ್ ಪೆರ್ಮುಖ ಅವರು ಮೊದಲ ನಿಧಿ ಕೂಪನ್ ಸ್ವೀಕರಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನರೇಂದ್ರ ಬಿ.ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧ.ಗ್ರಾ.ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಹರೀಶ್ ರೈ ಪುತ್ರಕಳ, ಉದಾರ ದಾನಿ ಶಂಕರನಾರಾಯಣ ಭಟ್ ಪೆರುಮುಂಡ, ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಮಹೇಶ್ ವಳಕ್ಕುಂಜ ಶುಭಾಶಂಸನೆಗೈದರು. ಪ್ರಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ನಿಧಿ ಕೂಪನ್ ಬಿಡುಗಡೆಗೊಳಿಸಿದರು. ಸಾಮಾಜಿಕ ಮುಂದಾಳು ತಿರುಪತಿಕುಮಾರ ಭಟ್ ಪೆರ್ಮುಖ ಮೊದಲ ನಿಧಿ ಕೂಪನ್ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ದಾನಿಗಳಿಂದ ಹಾಗೂ ಭಕ್ತಾದಿಗಳಿಂದ ನಿ ಸಮರ್ಪಣೆ ನಡೆಯಿತು. ಕಾರ್ಯದರ್ಶಿ ಸುಬ್ರಹ್ಮಣ್ಯ ಪೈ ಸ್ವಾಗತಿಸಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ವಳಮಲೆ ವಂದಿಸಿದರು. ಕೋಶಾಧಿಕಾರಿ ಗುರುಪ್ರಸಾದ ರೈ ನಿರೂಪಣೆಗೈದರು. ಬೆಳಗ್ಗೆ ಬ್ರಹ್ಮಶ್ರೀ ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಅವರಿಂದ ಶ್ರೀ ಮಹಾಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಸಿಕೊಟ್ಟರು. ಮಧ್ಯಾಹ್ನ ಮಹಾಪೂಜೆ, ಪ್ರಸಾದವಿತರಣೆ, ಅನ್ನದಾನ ನಡೆಯಿತು.