ತಿರುವನಂತಪುರ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಟುಂಬವೂ ಭಾಗಿಯಾಗಿದೆ ಎಂದು ಆರೋಪಿ ಸ್ವಪ್ನಾ ಸುರೇಶ್ ಬಹಿರಂಗಪಡಿಸಿದ ಬೆನ್ನಲ್ಲೇ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ಕೆಲವು ಪ್ರಕರಣಗಳ ಆರೋಪಿಗಳು ದೃಶ್ಯ ಮಾಧ್ಯಮಗಳ ಮೂಲಕ ಮಾಡಿರುವ ಕೆಲವು ಉಲ್ಲೇಖಗಳನ್ನು ಗಮನಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ನಿನ್ನೆ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಹಗರಣದ ಕುರಿತು ಸಂಘಟಿತ ಮತ್ತು ಪರಿಣಾಮಕಾರಿ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಮೊದಲು ಕೇಳಿದ್ದು ರಾಜ್ಯ ಸರ್ಕಾರ. ತನಿಖೆಯ ವಿಧಾನಗಳ ಬಗ್ಗೆ ನ್ಯಾಯಸಮ್ಮತವಾದ ಕಾಳಜಿಯನ್ನು ಸಮಯೋಚಿತವಾಗಿ ಎತ್ತಲಾಗಿತ್ತು ಎಂದು ಅವರು ಹೇಳಿದರು.
ಕೆಲವು ಕಡೆಗಳಿಂದ ಮಾಧ್ಯಮಗಳು ತಮ್ಮ ವಿರುದ್ಧ ಸಂಕುಚಿತ ರಾಜಕೀಯ ಕಾರಣಗಳಿಗಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ದೇಶದ ಆರ್ಥಿಕತೆಯನ್ನು ಹಾಳುಗೆಡವುತ್ತಿರುವ ಆರ್ಥಿಕ ಅಪರಾಧಗಳ ಮೂಲದ ಹುಡುಕಾಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು. ಇದು ಕೆಲವು ರಾಜಕೀಯ ಅಜೆಂಡಾದ ಭಾಗವಾಗಿದೆ. ಇಂತಹ ಅಜೆಂಡಾಗಳನ್ನು ಜನ ತಿರಸ್ಕರಿಸುತ್ತಾರೆ. ಸ್ವಲ್ಪ ಸಮಯದ ನಂತರ, ಪ್ರಕರಣದಲ್ಲಿ ಪ್ರತಿವಾದಿ ಹಳೆಯ ವಿಷಯಗಳನ್ನು ಪುನರಾವರ್ತಿಸುತ್ತಾರೆ. ಈಗ ಆಕೆ ಹೇಳಿರುವುದರಲ್ಲಿ ಲವಲೇಶ ನೈಜತೆ ಇಲ್ಲ ಎಂದವರು ತಿಳಿಸಿದರು.
ಮತ್ತೆ ಸುಳ್ಳನ್ನು ಹಬ್ಬಿಸಿ ಈ ಸರ್ಕಾರದ ಮತ್ತು ರಾಜಕೀಯ ನಾಯಕತ್ವದ ಇಚ್ಛಾಶಕ್ತಿಗೆ ಧಕ್ಕೆ ತರಬಹುದು ಎಂದು ಯೋಚಿಸುವುದು ವ್ಯರ್ಥ. ಸುದೀರ್ಘ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಜನರೊಂದಿಗೆ ಇದ್ದು, ಸುಳ್ಳು ಆರೋಪಗಳನ್ನೆದುರಿಸಿ ಸಾರ್ವಜನಿಕ ಜೀವನದಲ್ಲಿ ಮುನ್ನಡೆಯುತ್ತಿರುವವರ ವಿರುದ್ಧ ಈ ರೀತಿಯ ಅಗ್ಗದ ಆರೋಪಗಳನ್ನು ಮಾಡುವುದು ಮತ್ತು ತೆಗೆದುಕೊಳ್ಳುವುದು ಷಡ್ಯಂತ್ರದ ಭಾಗವಾಗಿದೆ. ಇಂತಹವರು ಹಳೆಯ ಆರೋಪಗಳ ಲಾಭ ಪಡೆಯಬಹುದೆಂದು ಭಾವಿಸುವವರಿಗೆ ನಮ್ಮ ಸಮಾಜ ತಕ್ಕ ಉತ್ತರ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.
ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರವನ್ನು ದೂಷಿಸುವ ಉದ್ದೇಶದಿಂದ ನಡೆಯುತ್ತಿರುವ ಆಧಾರ ರಹಿತ ಅಪಪ್ರಚಾರವನ್ನು ಜನ ಗುರುತಿಸಿ ತಿರಸ್ಕರಿಸಲಿದ್ದಾರೆ ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.