ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರು ಉಪಸ್ಥಿತರಿರುವ ಕಾರ್ಯಕ್ರಮಕ್ಕೆ ಆಗಮಿಸುವವರು ಯಾರೂ ಕಪ್ಪು ಬಣ್ಣದ ಉಡುಪು, ಕಪ್ಪು ಮಾಸ್ಕ್ ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಮಾತ್ರಲ್ಲ, ಕಪ್ಪು ಬಣ್ಣದ ಕೊಡೆ ಕೂಡ ತರುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.
ಅಂದಹಾಗೆ ಇದೊಂಥರ 'ಕಾಗೆ-ಬಂಗಾರ' ಪ್ರಕರಣ. ಏಕೆಂದರೆ ಈ ಕಪ್ಪು ಬಣ್ಣ ನಿಷೇಧಕ್ಕೂ ಬಂಗಾರಕ್ಕೂ ಸಂಬಂಧವಿದೆ. ಅಂದರೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಪ್ನಾ ಸುರೇಶ್, ಸಿಎಂ ಪಿಣರಾಯಿ ವಿಜಯನ್ ಪುತ್ರಿ ಮತ್ತು ಪತ್ನಿ ಸೇರಿ ಕುಟುಂಬಸ್ಥರ ಪಾತ್ರವಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಇಂದು ಕೇರಳದ ಕೊಝಿಕೋಡ್ನ ಕೆಥೊಲಿಕ್ ಚರ್ಚ್ನಲ್ಲಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಗಮಿಸುವವರಿಗೆ ಚರ್ಚ್ನಿಂದ ಈ ಸೂಚನೆ ನೀಡಲಾಗಿದೆ. ಸಪ್ನಾ ಸುರೇಶ್ ಪ್ರಕರಣದಲ್ಲಿ ವಿಜಯನ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ. ಅದಕ್ಕೆ ಅನುಸಾರವಾಗಿ ಚರ್ಚ್ನ ವಾಟ್ಸ್ಆಯಪ್ ಗ್ರೂಪ್ಗಳಲ್ಲಿ ಈ ಸೂಚನೆ ಹರಿದಾಡಿದೆ. ಕೊಚ್ಚಿಯಲ್ಲಿ ಶನಿವಾರ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕಪ್ಪು ಬಟ್ಟೆ ಧರಿಸಿ ಬಂದಿದ್ದವರನ್ನು ಪೊಲೀಸರು ತಡೆದ ಪ್ರಸಂಗ ನಡೆದಿತ್ತು.