ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಪಿ.ಪಿ. ಮಾಧವನ್ ವಿರುದ್ಧ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆಯ ಕೇಸ್ ದಾಖಲಾಗಿದೆ. 26 ವರ್ಷದ ಯುವತಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉದ್ಯೋಗ ಕೊಡಿಸುವ ನೆಪದಲ್ಲಿ ಆರೋಪಿ ಆಮಿಷವೊಡ್ಡಿದ್ದರು ಮತ್ತು ಮದುವೆಯಾಗುವುದಾಗಿ ನಂಬಿಸಿದ್ದರು ಎಂದು ಯುವತಿ ಆರೋಪಿರುವುದಾಗಿ ಅವರು ಹೇಳಿದ್ದಾರೆ. ತನ್ನ ಮೇಲೆ ಅತ್ಯಾಚಾರವಾಗಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು ಎಂದು ಯುವತಿ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಜೂನ್ 25 ರಂದು ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ದ್ವಾರಕ ಡಿಸಿಪಿ ಎಂ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಹಿರಿಯ ರಾಜಕೀಯ ನಾಯಕರೊಬ್ಬರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ 71 ವರ್ಷದ ವ್ಯಕ್ತಿಯ ವಿರುದ್ಧದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಡಿಸಿಪಿ ರಾಜಕೀಯ ಮುಖಂಡನ ಹೆಸರನ್ನು ಹೇಳದಿದ್ದರೂ, ಮಾಧವನ್ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.