ಕಾನ್ಪುರ : ಇನ್ನೇನು ತಾಳಿ ಕಟ್ಟುವ ಹಂತದಲ್ಲಿತ್ತು. ವಧು ಮದುವೆಯ ಕನಸು ಕಾಣುತ್ತಿದ್ದಳು. ಅಷ್ಟರಲ್ಲಿಯೇ ವರ ಮಹಾಶಯ ತಾನು ನೀರು ಕುಡಿದು ಬರುವುದಾಗಿ ಹೇಳಿ ಎದ್ದು ಹೋದ. ಎಷ್ಟು ಹೊತ್ತಾದರೂ ವಾಪಸ್ ಬರಲೇ ಇಲ್ಲ. ಆತನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆನೇ ಆಗಲಿಲ್ಲ.
ಕೊನೆಗೆ ಮದುಮಗಳು ಮದುವೆಯಾಗದೇ ವಾಪಸ್ ಬರಬೇಕಾಯಿತು!
ಇಂಥದ್ದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಜೋಡಿಗಾಗಿ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಿದ್ದರು. 144 ಜೋಡಿಗಳು ಜತೆಯಾಗಬೇಕಿತ್ತು. ಸಚಿವ ಧರಂ ಪಾಲ್ ಸಿಂಗ್ ಅವರೂ ಕಾರ್ಯಕ್ರಮದಲ್ಲಿ ಹಾಜರು ಇದ್ದರು.
ಈ ಸಂದರ್ಭದಲ್ಲಿ ಒಬ್ಬ ವರ ನಾಪತ್ತೆಯಾಗಿ ಕೋಲಾಹಲ ಸೃಷ್ಟಿಸಿದ. ಕೊನೆಗೆ ತಿಳಿದದ್ದು ಏನೆಂದರೆ, ಈತ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ. ಬೈಕ್ಬೇಕು ಎಂದು ವಧುವಿನ ಕಡೆಯವರಿಗೆ ಹೇಳಿದ್ದ. ಆದರೆ ತಮ್ಮ ಬಳಿ ಅಷ್ಟೊಂದು ಹಣ ಇಲ್ಲದೇ ಇರುವ ಕಾರಣ ಅದನ್ನು ಕೊಡಿಸಲು ಆಗುವುದಿಲ್ಲ ಎಂದು ಅವರು ಹೇಳಿದ್ದರು. ಮದುವೆಯ ದಿನವೂ ಆತ ಬೇಡಿಕೆ ಇಟ್ಟಿದ್ದಾನೆ. ಆದರೆ ಆಗಲೂ ವಧುವಿನ ಪಾಲಕರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟುಗೊಂಡ ವರ, ಈ ರೀತಿ ಓಡಿಹೋಗಿ ಸೇಡು ತೀರಿಸಿಕೊಂಡಿದ್ದಾನೆ! ಪೊಲೀಸರು ವರನಿಗಾಗಿ ಹುಡುಕಾಟ ನಡೆಸಿದ್ದಾರೆ.