ನವದೆಹಲಿ: ನಿಲಂಬೂರು- ನಂಜನಗೂಡು ರೈಲು ಯೋಜನೆಯ ಪರವಾಗಿ ವಯನಾಡು ಸಂಸದರೂ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ.
ಈ ಸಂಬಂಧ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಜೂನ್ 4ರಂದು ಪತ್ರ ಬರೆದಿರುವ ರಾಹುಲ್ ಗಾಂಧಿ, ಯೋಜನೆಯ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಯೋಜನೆಗೆ ಕೇರಳ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಈ ರೈಲು ಮಾರ್ಗ ಹಾದು ಹೋಗಲಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. '₹3,384 ಕೋಟಿ ಮೊತ್ತದ ಈ ಮಾರ್ಗ 22 ಕಿ.ಮೀ. ದೂರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾಯ್ದು ಹೋಗುತ್ತದೆ. ಪರಿಸರ ಹಾಗೂ ಆರ್ಥಿಕ ದೃಷ್ಟಿಯಿಂದ ಇದು ಕಾರ್ಯಸಾಧುವಾದ ಯೋಜನೆ ಅಲ್ಲ' ಎಂಬುದು ಕರ್ನಾಟಕದ ವನ್ಯಜೀವಿ ತಜ್ಞರ ಅಭಿಮತ.
'ಈ ಯೋಜನೆಯ ಜಾರಿಯಲ್ಲಿ ಅನಗತ್ಯ ವಿಳಂಬ ಆಗುತ್ತಿದೆ. ವಯನಾಡು ಲೋಕಸಭಾ ಕ್ಷೇತ್ರದ ಜನರು ಯೋಜನೆಯ ವಿಳಂಬದ ಬಗ್ಗೆ ನಿರಂತರ ಹೋರಾಟ ಮಾಡುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತಿದ್ದೆ. ರೈಲ್ವೆ ಸಚಿವರಿಗೂ ಪತ್ರ ಬರೆದಿದ್ದೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
'ರಾಷ್ಟ್ರೀಯ ಹೆದ್ದಾರಿ 766ರಲ್ಲಿ ವಾಹನಗಳ ಸಂಚಾರಕ್ಕೆ ರಾತ್ರಿ ಹೊತ್ತಿನಲ್ಲಿ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ, ರಾಜ್ಯ ಹಾಗೂ ಅಂತರ್ ರಾಜ್ಯದ ಓಡಾಟದ ಮೇಲೆ ಪರಿಣಾಮ ಬೀರುತ್ತಿದೆ. ಒಂದು ವೇಳೆ ಈ ಯೋಜನೆ ಜಾರಿಯಾದರೆ ಜನರ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ' ಎಂದು ಅವರು ಗಮನ ಸೆಳೆದಿದ್ದಾರೆ.