HEALTH TIPS

ನಾಸಿಕ್ ತಲುಪಿತು ಸದ್ಗುರು ಮಣ್ಣು ಉಳಿಸಿ ಅಭಿಯಾನ

 ನಾಸಿಕ್​: ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ನಾಸಿಕ್ ತಲುಪಿದ್ದು, ಇಲ್ಲಿ ದೇಶದೂತ್ ಮತ್ತು ಮರಾಠ ವಿದ್ಯಾ ಪ್ರಸಾರಕ್ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರು ಮಾತನಾಡಿದರು.

ಮಣ್ಣು ಅವನತಿಯತ್ತ ಸಾಗಿದರೆ ನಾವು ಬದುಕುಳಿಯುವುದೇ ಕಷ್ಟವಾಗುತ್ತದೆ. ಒಮ್ಮೆ ಆಹಾರದ ಕೊರತೆ ಶುರುವಾದರೆ, ನಾಗರಿಕತೆಯ ಪತನವಾಗುತ್ತದೆ. ನಮ್ಮ ಮನುಷ್ಯತ್ವವೇ ಕಾಣೆಯಾಗಿ ಹೋಗುವ ಪರಿಸ್ಥಿತಿ ಬರುತ್ತದೆ ಎಂದು ಸದ್ಗುರು ಎಚ್ಚರಿಸಿದರು.


ಮಣ್ಣು ಉಳಿಸಿ ಅಭಿಯಾನದ 100 ದಿನಗಳ 30,000 ಕಿ.ಮೀ. ಒಬ್ಬಂಟಿ ಬೈಕ್ ಪಯಣದಲ್ಲಿರುವ ಸದ್ಗುರು, ಪ್ರಸ್ತುತ ಭಾರತದ ಸಂಚಾರದಲ್ಲಿ 25,000 ಕಿ.ಮೀ. ಕ್ರಮಿಸಿ ನಾಸಿಕ್ ತಲುಪಿದ್ದಾರೆ. ಅಲ್ಲಿಂದ ಅವರು ಮುಂಬೈಗೆ ತೆರಳಿ, ಜಿಯೋ ವರ್ಲ್ಡ್ ಕನ್ವೆನ್ಷನ್​ ಸೆಂಟರ್​ನಲ್ಲಿ ಪ್ರಖ್ಯಾತ ನಾಯಕರು, ನಟ-ನಟಿಯರು ಭಾಗವಹಿಸುವ ಒಂದು ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಮೊದಲ ಸಲ ನಾಸಿಕ್​ಗೆ ಬರುತ್ತಿರುವ ಸದ್ಗುರುವನ್ನು ಕೆಟಿಎಚ್‌ಎಮ್ ಕಾಲೇಜಿನ ಸೆಕ್ರಟರಿ ಜನರಲ್ ನೀಲಿಮತೈ ವಸಂತರಾವ್ ಪವಾರ್ ಮತ್ತು ದೇಶ್​ದೂತ್​ ಮ್ಯಾನೇಜಿಂಗ್ ಡೈರೆಕ್ಟರ್​ ಜನಕ್ ಸರ್ದಾ ಅವರು ಮರಾಠ ಪರಂಪರೆಯ ಧೈರ್ಯ- ಸಾಹಸಗಳ ಗುರುತಾದ ಪಗಡಿ (ಪೇಟ)ಯನ್ನು ಕೊಟ್ಟು ಗೌರವಿಸಿದರು. ನೀಲಿಮತೈ ವಸಂತರಾವ್ ಪವಾರ್ ನಾಸಿಕ್​​ನ ಪಂಚತತ್ವ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ಗುರುತಾದ ಪೈಥಾನಿ ರೇಷ್ಮೆ ಶಾಲನ್ನು ಹೊದಿಸಿ ಗೌರವಿಸಿದರು.

ನಾವು ಸಾಮಾನ್ಯವಾಗಿ ಜಡವಸ್ತುವೆಂದು ಭಾವಿಸುವ 15ರಿಂದ 18 ಇಂಚಿನಷ್ಟಿರುವ ಮೇಲ್ಪದರದ ಮಣ್ಣು ಕೋಟ್ಯಂತರ ಜೀವಿಗಳ ವಾಸ ಸ್ಥಾನವಾಗಿದೆ ಎಂದು ಸದ್ಗುರು ಜ್ಞಾಪಿಸಿದರು. ಮಾನವರ ಚಟುವಟಿಕೆಯಿಲ್ಲದೆ ಒಂದೇ ಒಂದು ಇಂಚು ಮಣ್ಣಿನ ಪದರವನ್ನು ಸೃಷ್ಟಿಸಲು 600-800 ವರ್ಷಗಳೇ ಬೇಕಾಗುತ್ತದೆ. ಆದರೆ ಈಗಿನ ಮಾನವ ಜನಾಂಗದ ಚಟುವಟಿಕೆಯನ್ನು ಗಮನಿಸಿದರೆ, ಅದೇ ಒಂದು ಇಂಚು ಮಣ್ಣಿನ ಮೇಲ್ಪದರವನ್ನು ಸೃಷ್ಟಿಸಲು 13,000 ವರ್ಷಗಳೇ ಬೇಕಾಗುತ್ತದೆ ಎಂದು ವಿವರಿಸುತ್ತ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯವೆಂದು ವಿವರಿಸಿದರು.

ನಾವು ಕಾಲದ ಎಂತಹ ಹೊಸ್ತಿಲಲ್ಲಿದ್ದೇವೆ ಎಂದು ಮನಮುಟ್ಟುವಂತೆ ಹೇಳಿದ ಸದ್ಗುರು, ಒಂದು ಪೀಳಿಗೆಯವರಾಗಿ ಮುಂದಿನ 10-15 ವರ್ಷಗಳಲ್ಲಿ ನಾವು ಪ್ರಮುಖವಾದ ಗಮನಾರ್ಹ ಬದಲಾವಣೆ ತರುವಂತಹ ಸದವಕಾಶ ನಮಗಿದೆ. ನಾವೀಗ ಇದನ್ನು ಮಾಡದಿದ್ದರೆ ಜೀವವೈವಿಧ್ಯಗಳ ನಷ್ಟದಿಂದ ಮಣ್ಣಿನ ಪುನರುಜ್ಜೀವನ ಇನ್ನೂ 25-40 ವರ್ಷಗಳಾದರೂ ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು. ಪ್ರಜಾಸತ್ತಾತ್ಮಕ ದೇಶಗಳಲ್ಲಿ, ಸರ್ಕಾರವು ಜನದನಿಗೆ ಪ್ರಾಮುಖ್ಯತೆ ಕೊಡುವುದರಿಂದ, ಜನರು ತಮ್ಮ ದನಿಯೆತ್ತಿ, ಮಣ್ಣಿನ ಪುನರುಜ್ಜೀವನದ ಕಾರ್ಯನೀತಿಗಳು, ಶಾಸನಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಜಾರಿಗೆ ಬರುವವರೆಗೂ ತಮ್ಮ ದನಿಯನ್ನು ಏರಿಸುತ್ತಲೇ ಇರಬೇಕು ಎಂದು ಒತ್ತಿ ಹೇಳಿದರು.

ಈ ಅಭಿಯಾನವನ್ನು ಪ್ರಾರಂಭಿಸಿರುವುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ ದೇಶ್​ದೂತ್​ನ ಮ್ಯಾನೇಜಿಂಗ್ ಡೈರೆಕ್ಟರ್ ಜನಕ್ ಸರ್ದಾ, ನಾವೆಲ್ಲ ಮಣ್ಣಿನ ಗುಣಮಟ್ಟ ಕ್ಷೀಣಿಸುತ್ತಿರುವುದನ್ನು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ರೈತರು ಈ ನಷ್ಟವನ್ನು ಪ್ರತಿದಿನ ಅನುಭವಿಸುತ್ತಿದ್ದಾರೆ. ರೈತರಷ್ಟೇ ಅಲ್ಲದೆ, ಗ್ರಾಹಕರಾದ ನಾವು ಕೂಡ ಇದನ್ನು ಆಹಾರದ ಗುಣಮಟ್ಟ ಮತ್ತು ಉತ್ಪಾದನಾ ಮಟ್ಟದಲ್ಲಿ ಗಮನಾರ್ಹವಾಗಿ ಅನುಭವಿಸುತ್ತಿದ್ದೇವೆ. ನೀವು ಹೇಳುತ್ತಿರುವಂತೆ ಈಗ ನಾವು ಇದರತ್ತ ಕೆಲಸ ಮಾಡಲು ಸರಿಯಾದ ಸಮಯವಾಗಿದೆ. ದೇಶ್​ದೂತ್​ನ ನಾವೆಲ್ಲ ಈ ಚಟುವಟಿಕೆಗೆ ಇದನ್ನೇ ನಾಂದಿಯಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು.

ಪ್ರಖ್ಯಾತ ಸಂಗೀತಗಾರರಾದ ಪಂಡಿತ್ ಅವಿರಾಜ್ ತಯಡೆ ಮತ್ತು ತಂಡದವರ ಮನೋರಂಜಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸರಣಿಯಿಂದ ಈ ಕಾರ್ಯಕ್ರಮ ಅತ್ಯುನ್ನತ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆಯಾಗಿತ್ತು. ಭರತನಾಟ್ಯ ಕಲಾವಿದೆಯಾದ ರಾಧೆ ಜಗ್ಗಿಯವರು, ಈಶಾ ಸಂಸ್ಕೃತಿಯ ತಂಡದೊಂದಿಗೆ ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಕಲರಿಪಯಟ್ಟು ಮುಂತಾದ ವೈವಿಧ್ಯಮಯ ಕಲಾ ಸಂಯೋಜನೆಗಳಿಂದ ಮಾನವ ಜನಾಂಗ ಮತ್ತು ಮಣ್ಣಿನ ನಂಟನ್ನು ಕಲಾತ್ಮಕವಾಗಿ ಪ್ರದರ್ಶಿಸಿದರು. ನಾಸಿಕ್​ನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ಪ್ರಖ್ಯಾತ ನಾಸಿಕ್ ಡೋಲು ಕಾರ್ಯಕ್ರಮ ಇಲ್ಲದೆ ಸಂಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಅಖ್ತರ್ ಭೈ ಶೇಖ್ ಅವರ ನಾಸಿಕ್ ಡೋಲು ಕಾರ್ಯಕ್ರಮ ಈ ನಗರದ ಖ್ಯಾತಿಗೆ ಒತ್ತು ನೀಡಿತು. ಅಷ್ಟೇ ಅಲ್ಲದೆ ಸದ್ಗುರುವನ್ನು ಸ್ವಾಗತಿಸಲು ಜನರು ಸಾಂಪ್ರದಾಯಿಕ, ವರ್ಣರಂಜಿತ ವಸ್ತ್ರ ಧರಿಸಿ ಮಹಾರಾಷ್ಟ್ರದ ಸಾಂಪ್ರದಾಯಿಕ ಅದ್ದೂರಿಯನ್ನು ಜನರ ಕಣ್ಣಿಗೆ ಔತಣವಾಗುವಂತೆ ಮೆರೆದರು.

ಮಾರ್ಚ್ 21ರಂದು ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಒಬ್ಬಂಟಿ ಮೋಟಾರ್‌ ಬೈಕ್ ಪ್ರಯಾಣವನ್ನು ಪ್ರಾರಂಭಿಸಿದ ಸದ್ಗುರು ಕೆಲವು ದಿನಗಳ ಹಿಂದೆ ಗುಜರಾತ್‌ನ ಪಶ್ಚಿಮ ಭಾಗದ ಬಂದರು ನಗರವಾದ ಜಾಮ್‌ನಗರ ತಲುಪಿದರು. ಬಳಿಕ ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ನವದೆಹಲಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು. ನವದೆಹಲಿಯಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ವ್ಯಕ್ತಪಡಿಸಿದರು. ಸದ್ಗುರು ಮಣ್ಣಿನ ಪುನರುಜ್ಜೀವನಕ್ಕಾಗಿ ಬೇಕಾದ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಹಾರಗಳುಳ್ಳ ಮಣ್ಣು ಉಳಿಸಿ ಕಾರ್ಯನೀತಿ ಕೈಪಿಡಿಯನ್ನು ಪ್ರಧಾನಿಯವರಿಗೆ ನೀಡಿದರು.

ಈಗಾಗಲೇ ಗುಜರಾತ್ ಮತ್ತು ರಾಜಸ್ಥಾನ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಣ್ಣು ಉಳಿಸಲು ಒಡಂಬಡಿಕೆ(ಎಂಒಯು)ಗೆ ಸಹಿ ಹಾಕಿವೆ. ಅಭಿಯಾನವು ಇಲ್ಲಿಯವರೆಗೆ 2.5 ಶತಕೋಟಿ ಜನರನ್ನು ತಲುಪಿದೆ, ಜೊತೆಗೆ 74 ದೇಶಗಳು ತಮ್ಮ ರಾಷ್ಟ್ರಗಳ ಮಣ್ಣನ್ನು ಉಳಿಸಲು ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಭಾರತದ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಮಣ್ಣು ಮತ್ತು ಅವರ ಭವಿಷ್ಯವನ್ನು ಉಳಿಸಲು ಕಾರ್ಯನಿರ್ವಹಿಸುವಂತೆ ವಿನಂತಿಸಿದ್ದಾರೆ. ಉತ್ತರ ಪ್ರದೇಶದ 25 ಜಿಲ್ಲೆಗಳ 300 ಕ್ಕೂ ಹೆಚ್ಚು ಶಾಲೆಗಳ 65,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.

ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3ರಿಂದ 6 ಜೈವಿಕ ಅಂಶವನ್ನು ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ಆಗ್ರಹಪಡಿಸುವುದು. ಇಷ್ಟು ಕನಿಷ್ಠ ಜೈವಿಕ ಅಂಶವಿಲ್ಲದೆ, ಮಣ್ಣಿನ ವಿಜ್ಞಾನಿಗಳು ಮಣ್ಣಿನ ನಿರ್ಧಾರಿತ ಅವನತಿಯ ಬಗ್ಗೆ ಎಚ್ಚರಿಸಿದ್ದಾರೆ, ಈ ವಿದ್ಯಮಾನವನ್ನು ಅವರು 'ಮಣ್ಣಿನ ಅಳಿವು' ಎಂದು ಕರೆಯುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries