ನವದೆಹಲಿ: ಬಿಜೆಪಿ ನಾಯಕರಿಬ್ಬರು ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಷಯ.
ಹೇಳಿಕೆಗಳನ್ನು ಖಂಡಿಸಿದ್ದ ಸೌದಿ ಅರೇಬಿಯಾ, ಕುವೈತ್, ಕತಾರ್, ಇರಾನ್ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ವರೆಗೂ ಈ ಹೇಳಿಕೆ ಪ್ರಹಸನ ತಲುಪಿತ್ತು.
ಇವೆಲ್ಲವೂ ಆಗುವ ವೇಳೆಗೆ ಈ ವಿಷಯ ಮತ್ತೊಂದು ಮಗ್ಗುಲಿಗೆ ಹೊರಳಿದ್ದು, ವಿದೇಶಾಂಗ ವ್ಯವಹಾರಗಳ ಬಗ್ಗೆ ಸಕ್ರಿಯರಾಗಿ ಬರೆಯುವ ಬ್ರಹ್ಮ ಚೆಲ್ಲನಿ, ಸೇರಿದಂತೆ ಅನೇಕ ಲೇಖಕರು, ಸಾಮಾಜಿಕ ಕಾರ್ಯಕರ್ತರು ಮುಸ್ಲಿಮ್ ರಾಷ್ಟ್ರಗಳಿಗೂ ಪ್ರಶ್ನೆಗಳನ್ನು ಹಾಕಲು ಪ್ರಾರಂಭಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ಭಾರತದ ನಾಯಕರ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಿರುವ, ಹೇಳಿಕೆಗಳನ್ನು ನೀಡುತ್ತಿರುವ ಮುಸ್ಲಿಮ್ ರಾಷ್ಟ್ರಗಳಿಗೆ ಚೀನಾದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರ ಮೇಲಿನ ದೌರ್ಜನ್ಯ ಕಣ್ಣಿಗೆ ಕಾಣುತ್ತಿಲ್ಲವೇ? ಅದೇಕೆ ಭಾರತ ಮಾತ್ರ ಸುಲಭವಾಗಿ ಟೀಕೆಗೆ ಸಿಗುವ ರಾಷ್ಟ್ರವೇ? ಎಂಬ ಪ್ರಶ್ನೆಗಳನ್ನು ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಾಗಳ ಮೂಲಕ ಕೇಳಲಾಗುತ್ತಿದೆ.
ಭಾರತದಲ್ಲಿ ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ್ದ ನೇತಾರರ ವಿರುದ್ಧ ಕೂಗುತ್ತಿರುವ ಕೆಲವು ಮುಸ್ಲಿಮ್ ರಾಷ್ಟ್ರಗಳು ಮುಸಲ್ಮಾನರನ್ನು ಬಂಧಿಯಾಗಿರಿಸಿರುವುದು ಹಾಗೂ ಕುರಾನ್ ಗಳನ್ನು ವಶಪಡಿಸಿಕೊಳ್ಳುವುದೂ ಸೇರಿದಂತೆ ಇಸ್ಲಾಮ್ ಮೇಲಿನ ಚೀನಾದ ದೌರ್ಜನ್ಯಗಳ ಬಗ್ಗೆ ಮೌನವಾಗಿವೆ ಭಾರತವನ್ನು ಮೃದು ರಾಷ್ಟ್ರ ಎಂದು ಭಾವಿಸಿರುವುದು ಇದಕ್ಕೆ ಕಾರಣವೇ? ಎಂದು ಬ್ರಹ್ಮ ಚೆಲ್ಲನಿ ಪ್ರಶ್ನಿಸಿದ್ದಾರೆ.
ಕಸ್ತೂರಿ ಶಂಕರ್ ಎಂಬ ಸಾಮಾಜಿಕ ಕಾರ್ಯಕರ್ತ ಟ್ವಿಟರ್ ಮೂಲಕ ಇಂಥಹದ್ದೇ ಪ್ರಶ್ನೆ ಕೇಳಿದ್ದು, ಜಗತ್ತಿನ 2 ಬಿಲಿನ ಮುಸ್ಲಿಮರ ಭಾವನೆಗಳ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳುವ ಮುಸ್ಲಿಮ್ ರಾಷ್ಟ್ರಗಳು, ಅಫ್ಘಾನಿಸ್ತಾನ, ಸಿರಿಯಾ, ಚೀನಾ, ಬರ್ಮಾಗಳಲ್ಲಿನ ಮುಸ್ಲಿಮರಿಗಾಗಿ ಏನನ್ನೂ ಮಾಡುವುದಿಲ್ಲ. ನಮ್ಮ ಕೈಲಿ ಐಎಸ್ಐಎಸ್, ಚೀನಾ, ತಾಲೀಬಾನ್, ಗಳ ವಿರುದ್ಧ ಏನೂ ಮಾಡಲಾಗುವುದಿಲ್ಲ. ಆದ್ದರಿಂದ ಮೃದುವಾಗಿರುವವರನ್ನು ಗುರಿಯಾಗಿರಿಸಿಕೊಳ್ಳೋಣ ಎಂಬ ಧೋರಣೆ ಹೊಂದಿವೆ.
ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಸದಸ್ಯ ಬಲ್ಬೀರ್ ಪುಂಜ್ ಟ್ವಿಟರ್ ನಲ್ಲಿ ಬರೆದಿದ್ದು, ಚೀನಾ ತನ್ನ ಅಲ್ಪಸಂಖ್ಯಾತರನ್ನು ಪ್ರಮುಖವಾಗಿ ಮುಸ್ಲಿಮರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಜಗತ್ತಿಗೇ ತಿಳಿದಿದೆ. ಷಿನ್ ಜಿಯಾಂಗ್ ನಲ್ಲಿ ಮುಸ್ಲಿಮರು, ಇಸ್ಲಾಮ್ ನೊಂದಿಗೆ ವ್ಯವಹರಿಸುವಾಗ ಎಲ್ಲಾ ಮಾನವ ಹಕ್ಕುಗಳನ್ನು ಅಂತಾರಾಷ್ಟ್ರೀಯ ನಿಯಮಗಳನ್ನೂ ಗಾಳಿಗೆ ತೂರುತ್ತದೆ. ಆದರೂ ಜಗತ್ತಿನಲ್ಲಿ ಯಾರೂ ಈ ಬಗ್ಗೆ ಮಾತನಾಡುವುದಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಜಿಹಾದಿಗಳು ತಾವು ಪ್ರಧಾನಿ ಮೋದಿ ವಿರುದ್ಧ ಕೃತಕವಾಗಿ ಸೃಷ್ಟಿಸಿದ್ದ ಅಸಹಿಷ್ಣುತೆ ಅಸ್ತ್ರ ಕೊನೆಗೂ ಈಗಲಾದರೂ ಕೆಲಸ ಮಾಡುತ್ತಿದೆ ಎಂದು ಸಂಭ್ರಮಿಸುತ್ತಿದ್ದಾರೆ ಎಂದು ಬಲ್ಬೀರ್ ಪುಂಜ್ ಹೇಳಿದ್ದಾರೆ.