ಬದಿಯಡ್ಕ: ನಾಡುಕಂಡ ಶ್ರೇಷ್ಠ ಸಾಹಿತಿ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ನಿವಾಸದ ಸನಿಹ ನಿರ್ಮಿಸಲುದ್ದೇಶಿಸಿರುವ ಸ್ಮಾರಕ ಭವನದ ನಿರ್ಮಾಣಕಾರ್ಯ ಶೀಘ್ರ ಪೂರ್ತೀಕರಿಸುವುದರೊಂದಿಗೆ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯ ಎಂಬುದಾಗಿ ಗಡಿನಾಡ ಸಾಹಿತ್ಯ, ಸಾಂಸ್ಕøತಿಕ ಅಕಾಡಮಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ತಿಳಿಸಿದರು.
ಅವರು ಅಕಾಡಮಿ ವತಿಯಿಂದ ಬುಧವಾರ ಪೆರಡಾಲ ಕವಿತಾಕುಟೀರದಲ್ಲಿ ಆಯೋಜಿಸಲಾದ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ 107ನೇ ಹುಟ್ಟುಹಬ್ಬ ಆಚರಣೆ ಸಮರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಡಿನಾಡಿನಲ್ಲಿ ಕನ್ನಡದ ಉಳಿವಿಗೆ ನಿರಂತರ ಹೋರಾಟ ನಡೆಸುವುದರ ಜತೆಗೆ ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲು ತನ್ನ ಜೀವ ಸವೆಸಿದ ಮಹಾನ್‍ಚೇತನ ಡಾ. ಕಯ್ಯಾರ ಕಿಞಣ್ಣ ರೈ ಅವರಿಗೆ ಶಾಶ್ವತ ಸ್ಮಾರಕ ನಿರ್ಮಿಸುವುದಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಡಿನ ಮಹಾನ್ ಕವಿ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ನಿರ್ಮಿಸಲುದ್ದೇಶಿಸಿರುವ ಸ್ಮಾರಕ ಶೀಘ್ರ ತಲೆಯೆತ್ತುವಂತಾಗಲು ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಎಂ.ಅಬ್ಬಾಸ್, ಗ್ರಾಪಂ ಸದಸ್ಯೆ ಅನಸೂಯಾ, ಕುಂಬ್ಡಾಜೆ ಗ್ರಾಪಂ ಸದಸ್ಯ ಹರೀಶ್ ಗೋಸಾಡ, ಹಿರಿಯ ಕೃಷಿಕ ಗಂಗಾಧರ ಆಳ್ವ ಪೆರಡಾಲ,ನುಳ್ಳಿಪ್ಪಾಡಿಯ ಸಈತಮ್ಮಪುರುಷ ನಾಯಕ ಕನ್ನಡ ಗ್ರಂಥಾಲಯ ಸ್ಥಾಪಕ ವಾಮನ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಕವಿ ದಯಾನಂದ ರೈ ಕಳುವಾಜೆ, ಸಮಾಜಸೇವಕರಾದ ರಾಮ, ಹಮೀದ್ ಕೆಡೆಂಜಿ, ಡಾ. ಕಯ್ಯಾರ ಕಿಞಣ್ಣ ರೈ ಅವರ ಪುತ್ರರಾದ ದುರ್ಗಾಪ್ರಸಾದ್ ರೈ, ಪ್ರಸನ್ನ ರೈ, ರಂಗನಾಥ ರೈ, ಕೃಷ್ಣಪ್ರದೀಪ್ ರೈ, ರವಿರಾಜ ರೈ ಹಾಗೂ ಮನೆಯವರು ಉಪಸ್ಥಿತರಿದ್ದರು. ಅಕಾಡಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ವಸಂತ ಬಾರಡ್ಕ ಅವರು ಪ್ರಾರ್ಥನೆ ಹಾಡಿದರು. ಪ್ರಸನ್ನ ರೈ ವಂದಿಸಿದರು.
ಒಕ್ಕೊರಲ ಆಗ್ರಹ:
ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ನಿವಾಸ ಕವಿತಾಕುಟೀರದ ಸನಿಹದಲ್ಲಿ ಡಾ. ಕಯ್ಯಾರ ಅವರ ಮನೆಯವರು ಸ್ಮಾರಕ ನಿರ್ಮಾಣಕ್ಕಾಗಿ ನೀಡಿರುವ ಜಾಗ ಇಂದು ಕಾಡು ಬೆಳೆಯುತ್ತಿದೆ. ಕರ್ನಾಟಕ ಸರ್ಕಾರ ಈಗಾಗಲೇ ಒಂದು ಕೋಟಿ ರೂ. ಅನುದಾನ ಘೋಷಿಸಿದ್ದು, ಕಾಸರಗೋಡು ಜಿಪಂ ಹಾಗೂ ಕಾಸರಗೋಡು ಶಾಸಕರು ಅನುದಾನ ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ. ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ನಿರ್ಮಾಣಗೊಳ್ಳಲಿರುವ ಸ್ಮಾರಕದ ಕಾಮಗಾರಿ ಶೀಘ್ರ ಆರಂಭಿಸಲು ಕೇರಳ ಮತ್ತು ಕರ್ನಾಟಕ ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಡಾ. ಕಯ್ಯಾರ ಕಿಞಣ್ಣ ರೈ ಅವರ ಕುಟುಂಬಸ್ಥರು ಹಾಗೂ ಅತಿಥಿಗಳು ಒಕ್ಕೊರಲ ಆಗ್ರಹ ನಡೆಸಿದರು.
ಬೆಂಗಳೂರಲ್ಲೂ ಕಯ್ಯಾರ ನಮನ:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬೆಂಗಳೂರಿನ ಪ್ರಾಧಿಕಾರ ಕಚೇರಿಯಲ್ಲಿ ಬುಧವಾರ ಡಾ. ಕಯ್ಯಾರ ಕಿಞಣ್ಣ ರೈ ಅವರ 107ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.