ನವದೆಹಲಿ: ಬಿಜೆಪಿಗೆ ಬರುತ್ತಿದ್ದ ಆದಾಯ ಶೇ.80 ರಷ್ಟು ಕುಸಿತ ಕಂಡಿದ್ದು 2021 ನೇ ಹಣಕಾಸು ವರ್ಷದಲ್ಲಿ 752 ಕೋಟಿ ರೂಪಾಯಿಗಷ್ಟು ದೇಣಿಗೆ ಸಂಗ್ರಹವಾಗಿದೆ.
ಎಲೆಕ್ಟ್ರಾಲ್ ಬಾಂಡ್ ಗಳ ಮೂಲಕ ಲಭ್ಯವಾಗುತ್ತಿದ್ದ ದೇಣಿಗೆ 2,555 ಕೋಟಿಗಳಿಂದ 22.38 ಕೋಟಿ ರೂಪಾಯಿಗಳಿಗೆ ಕುಸಿತ ಕಂಡಿರುವುದನ್ನು ಚುನಾವಣಾ ಆಯೋಗಕ್ಕೆ ಮೇ.21 ರಂದು ಸಲ್ಲಿಸಿದ ಪಕ್ಷದ ವಾರ್ಷಿಕ ಆಡಿಟ್ ನಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಯ ಒಟ್ಟು ಖರ್ಚು 620 ಕೋಟಿ ರೂಪಾಯಿಗಳಾಗಿದ್ದು, 752.33 ಕೋಟಿ ರೂಪಾಯಿಗಳ ರಸೀದಿಗಳನ್ನು ತೋರಿಸಿದೆ. ಕಳೆದ ವರ್ಷ ಪಕ್ಷಕ್ಕೆ 3,623.28 ಕೋಟಿ ರೂಪಾಯಿಗಳಷ್ಟು ಹಣ ಬಂದಿದ್ದರೆ, 1,651 ಕೋಟಿ ರೂಪಾಯಿಗಳಷ್ಟು ಹಣ ಖರ್ಚಾಗಿತ್ತು.
2021 ರ ಮಾ.31 ವರೆಗೆ ಎಲೆಕ್ಟ್ರಾಲ್ ಬಾಂಡ್ ಗಳ ಮೂಲಕ ಪಕ್ಷಕ್ಕೆ 22.38 ಕೋಟಿ ರೂಪಾಯಿ ಲಭ್ಯವಾಗಿದೆ.
2020 ರಲ್ಲಿ ಎಲೆಕ್ಟ್ರಾಲ್ ಬಾಂಡ್ ಗಳ ಮೂಲಕ 2,555 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಚುನಾವಣೆ ಹಾಗೂ ಸಾಮಾನ್ಯ ಪ್ರಚಾರಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಜೆಪಿ 421 ಕೋಟಿ ರೂಪಾಯಿ ವ್ಯಯಿಸಿದೆ. ಲೋಕಸಭೆ ಚುನಾವಣೆಯ ಸನಿಹದಲ್ಲಿ ಪಕ್ಷಕ್ಕೆ ಬರುವ ದೇಣಿಗೆ ಹಾಗೂ ಖರ್ಚುಗಳು ಏರುಗತಿಯಲ್ಲಿರುವುದು ವಾಡಿಕೆ.