ಚಂಡೀಗಢ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಅವರ ಹತ್ಯೆಗೆ ಇನ್ನರೆಡು ದಿನದಲ್ಲಿ ಉತ್ತರ ನೀಡುತ್ತೇವೆ ಎಂದು ತಿಹಾರ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಓರ್ವ ಎಚ್ಚರಿಕೆ ನೀಡಿದ್ದಾನೆ.
ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ಅವಧಿಯಲ್ಲಿ ದೆಹಲಿ ಮೂಲದ ಗ್ಯಾಂಗ್ ಸ್ಟರ್ ನೀರಜ್ ಬವಾನಾ ಈ ರೀತಿಯ ಎಚ್ಚರಿಕೆ ನೀಡಿದ್ದು, ಮೂಸೆವಾಲಾರನ್ನು ಕೊಂದ ಹಂತಕರಿಗೆ ಇನ್ನೆರಡು ದಿನದಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ. ಪ್ರಸ್ತುತ ದೇಶದ ಅತ್ಯಂತ ಭದ್ರತಾ ಜೈಲು ಎಂದೇ ಖ್ಯಾತಿ ಪಡೆದಿರುವ ದೆಹಲಿಯ ತಿಹಾರ್ ಜೈಲಿನಲ್ಲಿ ಗ್ಯಾಂಗ್ ಸ್ಟರ್ ನೀರಜ್ ಬವಾನಾ ಇದ್ದು, ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಬವಾನಾರನ್ನು ತಿಹಾರ್ ಜೈಲಿಗಟ್ಟಲಾಗಿದೆ. ಇದೀಗ ಜೈಲಿನಿಂದಲೇ ಈ ಗ್ಯಾಂಗ್ ಸ್ಟರ್ ಗಾಯಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾನೆ. ಜೈಲಿನಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಬವಾನಾ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.
ಫೇಸ್‌ಬುಕ್‌ನಲ್ಲಿ ನಿನ್ನೆ ಬವಾನಾ ಅವರ ಹೆಸರಿನ ಖಾತೆಯಿಂದ ಈ ಪೋಸ್ಟ್ ಅಪ್ಲೋಡ್ ಆಗಿದ್ದು, "ಸಿದ್ದು ಮೂಸೆವಾಲಾ ಹೃದಯಕ್ಕೆ ಹತ್ತಿರವಾದ ನನ್ನ ಸಹೋದರನಾಗಿದ್ದ.., ಎರಡು ದಿನಗಳಲ್ಲಿ ಫಲಿತಾಂಶವನ್ನು ನೀಡುತ್ತೇನೆ" ಎಂದು ಬರೆಯಲಾಗಿದೆ. ಇದಕ್ಕೆ ಇಂಬು ನೀಡುವಂತೆ ಇದೇ ಗ್ಯಾಂಗ್ ಸ್ಟರ್ ನೀರಜ್ ಬವಾನಾ ಗ್ಯಾಂಗ್ ಸಿದ್ದು ಮೂಸೆವಾಲಾ ಹತ್ಯೆಯನ್ನು ಖಂಡಿಸಿ ಪ್ರತೀಕಾರದ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿತ್ತು. ಅಲ್ಲದೆ ಈ ಪೋಸ್ಟ್ ಗೆ ಜೈಲಿನಲ್ಲಿರುವ ಬವಾನಾ ಅವರ ಸಹಾಯಕರಾದ ಟಿಲ್ಲು ತಾಜ್‌ಪುರಿಯಾ ಮತ್ತು ದರೋಡೆಕೋರ ದಾವೀಂದರ್ ಬಂಬಿಹಾ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಗ್ಯಾಂಗ್ ಸ್ಟರ್ ಬವಾನಾರ ಸಹವರ್ತಿಗಳು ಪಂಜಾಬ್, ದೆಹಲಿ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಹರಡಿಕೊಂಡಿದ್ದಾರೆ. ನೀರಜ್ ಬವಾನಾ ಗ್ಯಾಂಗ್‌ನ ಸದಸ್ಯನೂ ಆಗಿರುವ ಭೂಪ್ಪಿ ರಾಣಾ ಅವರು ಈ ಹಿಂದೆ ಮತ್ತೊಂದು ಪೋಸ್ಟ್ ಅನ್ನು ಹಾಕಿದ್ದು, ಎದುರಾಳಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹಾಯಕ ಗೋಲ್ಡಿ ಬ್ರಾರ್ ರನ್ನು ಟೀಕಿಸಿದ್ದ. ಮೂಸೆವಾಲಾ ಹತ್ಯೆ ಹೃದಯವಿದ್ರಾವಕವಾಗಿದೆ. ಅಲ್ಲದೆ ಅಕಾಲಿದಳದ ಯುವ ನಾಯಕ ವಿಕ್ಕಿ ಮಿದ್ದುಖೇರಾ ಮತ್ತು ವಿದ್ಯಾರ್ಥಿ ನಾಯಕ ಗುರ್ಲಾಲ್ ಬಾರಾ ಅವರ ಹತ್ಯೆಯಲ್ಲಿ ಮೂಸೆವಾಲಾ ಕೈವಾಡವಿದೆ ಎಂದು ಬಿಷ್ಣೋಯ್ ಗ್ಯಾಂಗ್ ಸುಳ್ಳು ಆರೋಪ ಮಾಡಿದೆ. ಈ ಕೊಲೆಗಳಲ್ಲಿ ಸಿದ್ದು ಮೂಸ್ ವಾಲಾ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ, ಮೂಸೆವಾಲನ ಹತ್ಯೆಗೆ ಸಹಾಯ ಮಾಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಲೆಕ್ಕ ಹಾಕಲಾಗುತ್ತಿದೆ. ಶೀಘ್ರದಲ್ಲೇ ಸಿಧು ಸಾವಿಗೆ ಪ್ರತೀಕಾರ ತೀರಿಸಲಾಗುವುದು. ನಾವು ಯಾವಾಗಲೂ ಸಿದು ಕುಟುಂಬ ಮತ್ತು ಸ್ನೇಹಿತರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾನೆ.
ಮೂಸೆ ವಾಲಾ ಹತ್ಯೆ ಬಳಿಕ ಪಂಜಾಬ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಈ ಬಗ್ಗೆ ಪಂಜಾಬ್ ಪೊಲೀಸರು ಹೈ ಅಲರ್ಟ್ ನಲ್ಲಿದ್ದಾರೆ ಎನ್ನಲಾಗಿದೆ.