ಕುಂಬಳೆ: ಕನ್ನಡದ ಖ್ಯಾತ ಕವಿ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಕೃತಿಗಳು ಹಾಗೂ ಕನ್ನಡ ಭಾಷೆಗೆ ನೀಡಿದ ಕೊಡುಗೆಗಳನ್ನು ವಿವರಿಸುವ ಭಾಗವನ್ನು ಕರ್ನಾಟಕ ಶಿಕ್ಷಣ ಮಂಡಳಿ ಪಠ್ಯಪುಸ್ತಕದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಕಾಸರಗೋಡು ಜಿಲ್ಲಾ ಬಂಟರ ಸಂಘ ಪ್ರತಿಭಟಿಸಿದೆ. ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕವಿಯ ಕೃತಿಗಳು ಮತ್ತು ಇತಿಹಾಸವನ್ನು ಕೈಬಿಡಲಾಗಿದೆ.
ಕಯ್ಯಾರ ಕಿಞ್ಞಣ್ಣ ರೈ ಅವರು ಕನ್ನಡ ಭಾಷೆಗೆ ನೀಡಿದ ಕೊಡುಗೆಗಳಿಗಾಗಿ ಕರ್ನಾಟಕ ಸರ್ಕಾರವು 2006 ರಲ್ಲಿ ನಾಡೋಜ ಗೌರವ ನೀಡಿ ಸನ್ಮಾನಿಸಿತ್ತು. ಅವರು 1969 ರಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ಕಾಸರಗೋಡಿನ ಬದಿಯಡ್ಕದಲ್ಲಿರುವ ಕಿಞ್ಞಣ್ಣ ರೈ ಅವರ ನಿವಾಸಕ್ಕೆ ಭೇಟಿ ನೀಡಿ ಕೇರಳ ತುಳುರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಕರ್ನಾಟಕ ಸರ್ಕಾರವು ಪಠ್ಯಪುಸ್ತಕದಿಂದ ಕಿಞ್ಞಣ್ಣ ರೈ ಅವರ ಕೃತಿಗಳು ಹಾಗೂ ಇತಿಹಾಸವನ್ನು ತೆಗೆದು ಹಾಕುವ ಮೂಲಕ ಕನ್ನಡ ಭಾಷೆಗೆ ಅದರಲ್ಲೂ ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೆ ಅವಮಾನ ಮಾಡಿದೆ ಎಂದು ಕುಂಬಳೆಯಲ್ಲಿ ಬುಧವಾರ ಬಂಟರ ಸಂಘದ ಜಿಲ್ಲಾ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಈ ಬಗ್ಗೆ ಕರ್ನಾಟಕ ಸರ್ಕಾರ ಶೀಘ್ರ ಅಗತ್ಯ ಉಪಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಂಟರ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ. ಸುಬ್ಬಯ್ಯ ರೈ, ಕಾರ್ಯದರ್ಶಿ ಮೊಹನ ರೈ ಕಯ್ಯಾರು, ಕೋಶಾಧಿಕಾರಿ ಚಿದಾನಂದ ಆಳ್ವ, ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ |ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಶೆಟ್ಟಿ, ಕಿರಣ್ ಮಾಡ, ಸದಸ್ಯ ಪೃಥ್ವಿರಾಜ್ ಶೆಟ್ಟಿ ಉಜಾರು ಕುಂಬಳೆ ಉಪಸ್ಥಿತರಿದ್ದರು.