ಉಪ್ಪಳ: ವಿಶ್ವಯೋಗದಿನದ ಅಂಗವಾಗಿ ಜೂನ್ 21 ರಂದು ಕೊಂಡೆವೂರು ಮಠದ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ಯೋಗಪ್ರದರ್ಶನ, ಯೋಗಪ್ರಾತ್ಯಕ್ಷಿಕೆ ಹಾಗೂ ವಿದ್ಯಾರ್ಥಿಗಳಿಗೆ ಸಾತ್ವಿಕ ಭೋಜನವನ್ನು ಏರ್ಪಡಿಸಲಾಗಿತ್ತು.
ಶಾಲಾಪ್ರಾರ್ಥನೆಯೊಂದಿಗೆ ಆರಂಭವಾದ ಸಭಾಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮೂಡಬಿದರೆಯ ಆಳ್ವಾಸ್ ಯೋಗ ಹಾಗೂ ಪ್ರಕೃತಿಚಿಕಿತ್ಸಾ ಕಾಲೇಜಿನ ಡಾ. ಶ್ರುತಿ ಯು ರಾವ್ ವಿದ್ಯಾರ್ಥಿಗಳಿಗೆ ಯೋಗದ ಆವಶ್ಯಕತೆಯನ್ನು ವಿವರಿಸಿ ಸ್ಮರಣಶಕ್ತಿ ಹಾಗೂ ಏಕಾಗ್ರತೆಗೆ ಅನುಕೂಲವಾಗುವ ಕೆಲವು ಸರಳ ಯೋಗಾಸನಗಳನ್ನು ತಿಳಿಸಿಕೊಟ್ಟರು. ಇನ್ನೋರ್ವ ಸಂಪನ್ಮೂಲವ್ಯಕ್ತಿ ಡಾ. ದೀಕ್ಷಾಪ್ರಸಾದ್ ಅವರು ಜೀವನದಲ್ಲಿ ಶಿಸ್ತು ಹಾಗೂ ಶುಚಿತ್ವದ ಮಹತ್ವವನ್ನು ವಿವರಿಸಿದರು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು. ಶಾಲಾ ಕ್ಷೇಮಸಮಿತಿಯ ಅಧ್ಯಕ್ಷ ತಾರಾನಾಥ್, ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷೆ ಜಯಲಕ್ಷ್ಮೀ ಕಾರಂತ, ಪ್ರಾಂಶುಪಾಲ ಪ್ರವಿಧ್ ಹಾಗೂ ಶಾಲಾ ಕ್ಷೇಮ ಸಮಿತಿಯ ಸದಸ್ಯರೂ ಪ್ರಸಿದ್ಧ ಹೋಮಿಯೋಪತಿ ವೈದ್ಯರೂ ಆಗಿರುವ ಡಾ. ಮನು ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ರೇಖಾಪ್ರದೀಪ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಕ್ಷಮಾ ವಿಶ್ವಯೋಗದಿನದ ಕುರಿತು ಮಾಹಿತಿ ನೀಡಿದರು. ಶಿಕ್ಷಕಿಯರಾದ ಅರ್ಪಿತಾ ಸ್ವಾಗತಿಸಿ, ಅಶ್ವಿತಾ ವಂದಿಸಿದರು. ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಹಾಗೂ ವಿವಿಧ ಯೋಗಾಸನಗಳನ್ನು ಒಳಗೊಂಡ ವಿಶಿಷ್ಟ ಯೋಗಭಂಗಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ನಮ್ಮ ಪರಿಸರದಲ್ಲಿ ಲಭ್ಯವಿರುವ ಔಷಧೀಯಗುಣವುಳ್ಳ ಪೌಷ್ಟಿಕಾಂಶಯುಕ್ತ ಸೊಪ್ಪು-ತರಕಾರಿಗಳಿಂದ ತಯಾರಿಸಲಾದ ಸಾತ್ವಿಕ ಭೋಜನವನ್ನು ಏರ್ಪಡಿಸಲಾಗಿತ್ತು.