ನವದೆಹಲಿ:ಮುಂಬರುವ ರಾಷ್ಟ್ರಪತಿ ಚುನಾವಣೆಯು ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ,ಅದು ಎರಡು ವಿರುದ್ಧ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಮಾಜಿ ಕೇಂದ್ರಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಮಂಗಳವಾರ ತೃಣಮೂಲ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿನ್ಹಾ ಅವರನ್ನು ಪ್ರತಿಪಕ್ಷಗಳು ಜು.18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ತಮ್ಮ ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದವು.
ಮುರ್ಮು ಅವರ ಬಗ್ಗೆ ತನಗೆ ಅಪಾರ ಗೌರವವಿದೆ ಮತ್ತು ಅವರು ಜಾರ್ಖಂಡ್ನ ರಾಜ್ಯಪಾಲರಾಗಿದ್ದಾಗ ಅವರೊಂದಿಗೆ ಮಾತುಕತೆಗಳನ್ನು ನಡೆಸಿದ್ದೆ ಎಂದು ಹೇಳಿದ ಸಿನ್ಹಾ,ಅವರಿಗೆ ಈ ಚುನಾವಣೆಯಲ್ಲಿ ಶುಭವನ್ನು ಹಾರೈಸುತ್ತೇನೆ. ಆದಾಗ್ಯೂ ಇದು ಎರಡು ವಿರುದ್ಧ ಸಿದ್ಧಾಂತಗಳ ನಡುವಿನ ಕಾಳಗವಾಗಿದೆ ಎಂದರು.
ಒಂದು ಸಿದ್ಧಾಂತದ ನಾಯಕರು ಸಂವಿಧಾನವನ್ನು ಉಸಿರುಗಟ್ಟಿಸಲು ದೃಢಸಂಕಲ್ಪ ಮಾಡಿದ್ದಾರೆ ಮತ್ತು ರಾಷ್ಟ್ರಪತಿ ಕೇವಲ ರಬ್ಬರ್ ಸ್ಟಾಂಪ್ ಆಗಿರಬೇಕು ಎಂದು ಬಯಸಿದ್ದಾರೆ ಎಂದ ಸಿನ್ಹಾ,'ಸಂವಿಧಾನ ಮತ್ತು ಗಣರಾಜ್ಯವನ್ನು ರಕ್ಷಿಸಲು ನಿರ್ಧರಿಸಿರುವ ಇನ್ನೊಂದು ಸಿದ್ಧಾಂತಕ್ಕೆ ನಾನು ಸೇರಿರುವುದಕ್ಕೆ ಹೆಮ್ಮೆಯಿದೆ' ಎಂದು ಹೇಳಿದರು.
ಚುನಾಯಿತನಾದರೆ ಯಾವುದೇ ಭೀತಿ ಮತ್ತು ಪಕ್ಷಪಾತವಿಲ್ಲದೆ ಸಂವಿಧಾನದ ಮೂಲ ಮೌಲ್ಯಗಳನ್ನು ಮತ್ತು ಮಾರ್ಗದರ್ಶಿ ಆದರ್ಶಗಳನ್ನು ಎತ್ತಿ ಹಿಡಿಯುತ್ತೇನೆ ಎಂದ ಸಿನ್ಹಾ,ನಿರ್ದಿಷ್ಟವಾಗಿ ಸಂವಿಧಾನದ ಪಾಲಕನಾಗಿ ಕಾರ್ಯಾಂಗವು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಬೆಳಕನ್ನು ಮಬ್ಬಾಗಿಸಲು ಅವಕಾಶ ನೀಡುವುದಿಲ್ಲ ಎಂದು ಒತ್ತಿ ಹೇಳಿದರು.
ಸಿನ್ಹಾ ಜೂ.24ರಂದು ತನ್ನ ತವರು ರಾಜ್ಯ ಜಾರ್ಖಂಡ್ನಿಂದ ತನ್ನ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ.