ಸೂರತ್: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಳುಹಿಸಿದ್ದ ಶಿವಸೇನೆಯ ಇಬ್ಬರು ನಾಯಕರು ಸೂರತ್‌ನ ಹೋಟೆಲ್‌ನಲ್ಲಿ ತಂಗಿರುವ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಇತರ ಶಾಸಕರನ್ನು ಮಂಗಳವಾರ ಭೇಟಿ ಮಾಡಿ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಠಾಕ್ರೆ ಅವರ ಆಪ್ತರಾದ ಮಿಲಿಂದ್ ನಾರ್ವೇಕರ್ ಮತ್ತು ರವೀಂದ್ರ ಫಾಟಕ್ ಅವರು ನಿನ್ನೆಯಿಂದ ಹೋಟೆಲ್ ನಲ್ಲಿ ತಂಗಿರುವ ಶಿಂಧೆ ಮತ್ತು ಇತರ ಶಾಸಕರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು. ಆದರೆ ಚರ್ಚೆಯ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಾರ್ವೇಕರ್ ಮತ್ತು ಫಾಟಕ್ ಅವರು ರಸ್ತೆ ಮೂಲಕ ಮುಂಬೈಗೆ ತೆರಳಿದ್ದಾರೆ.
ಮಹಾರಾಷ್ಟ್ರದ ಎಂಎಲ್‌ಸಿ ಚುನಾವಣೆಯ ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳ ನಂತರ ಶಿಂಧೆ ಮತ್ತು ಅವರ ನಿಷ್ಠಾವಂತ ಶಾಸಕರು ಸೋಮವಾರ ತಡರಾತ್ರಿ ಸೂರತ್‌ನ ಹೋಟೆಲ್‌ಗೆ ಆಗಮಿಸಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಕೂಟವು ಹಿನ್ನಡೆ ಅನುಭವಿಸಿದ ಒಂದು ದಿನದ ನಂತರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಸ್ಪರ್ಧಿಸಿದ್ದ ಐದೂ ವಿಧಾನ ಪರಿಷತ್ ಸ್ಥಾನದಲ್ಲಿ ಬಿಜೆಪಿ ವಿಜಯ ಸಾಧಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿಯೊಬ್ಬರಿಗೆ ಸೋಲಾಗಿದೆ. ಚುನಾವಣೆಯಲ್ಲಿ ಆಡಳಿತಾರೂಢ ಶಾಸಕರು ಅಡ್ಡ ಮತದಾನ ಮಾಡಿದ್ದಾರೆಂದು ಗೊತ್ತಾಗ್ತಿದ್ದಂತೆ ಮತ್ತೊಂದು ಒಡಕು ಶುರುವಾಗಿದೆ.