ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 1938ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ ಆರಂಭಿಸಿದರು. ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಇದರ ಷೇರುದಾರರು.1938ರ ಸೆ.9ರಂದು ಲಖನೌದಲ್ಲಿ ಇಂಗ್ಲಿಷ್ ಭಾಷೆಯ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯ ಪ್ರಕಟಣೆ ಆರಂಭ.
1947ರಲ್ಲಿ ನೆಹರು ಪ್ರಧಾನಿಯಾದ ಬಳಿಕ ಎಜೆಎಲ್ ಅಧ್ಯಕ್ಷ ಸ್ಥಾನ ಬಿಟ್ಟು ಹೊರಬಂದರು. ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾತಂತ್ರ್ಯ ಬಂದ ನಂತರ ನ್ಯಾಷನಲ್ ಹೆರಾಲ್ಡ್ ದೇಶದ ಮುಂಚೂಣಿ ಪತ್ರಿಕೆಗಳಲ್ಲಿ ಅಗ್ರಮಾನ್ಯವಾಗಿತ್ತು. ನೆಹರು ಪ್ರಧಾನಿಯಾಗಿದ್ದಾಗ ಪತ್ರಿಕೆಗೆ ಭಾರಿ ಪ್ರಮಾಣದ ದೇಣಿಗೆ ನೀಡಲಾಯಿತು. ಕಾಂಗ್ರೆಸ್ ಪಕ್ಷ ಕೂಡ ಪತ್ರಿಕೆಯಲ್ಲಿ ಹಣ ಹೂಡಿತ್ತು. ಕಾಂಗ್ರೆಸ್ ಸಿದ್ಧಾಂತ ಪತ್ರಿಕೆಯಲ್ಲಿ ಹಾಸುಹೊಕ್ಕಾಗಿತ್ತು. ಒಂದರ್ಥದಲ್ಲಿ ಕಾಂಗ್ರೆಸ್ನ ಮುಖವಾಣಿಯಂತೆಯೇ ಆಗಿತ್ತು. ಎರಡು ದಶಕದ ಹಿಂದೆ ಕುಂಟುತ್ತ ಸಾಗಿದ ಎಜೆಎಲ್, ಆರ್ಥಿಕ ದುಸ್ಥಿತಿಯ ಕಾರಣ 2008ರಲ್ಲಿ ಪತ್ರಿಕೆಯ ಮುದ್ರಣವನ್ನು ಪೂರ್ಣವಾಗಿ ನಿಲ್ಲಿಸಿತು. ಡಿಜಿಟಲ್ ಆವೃತ್ತಿ 2016ರಲ್ಲಿ ಮರುಆರಂಭಗೊಂಡಿತು.
ಪ್ರಕರಣದ ವಿಚಾರಣೆ: ಪ್ರಕರಣದ ಸಂಬಂಧ 2014ರ ಜೂನ್ನಲ್ಲಿ ಮೆಟ್ರೋಪಾಲಿಟನ್ ಕೋರ್ಟ್ ಸೋನಿಯಾ, ರಾಹುಲ್ ಮತ್ತು ಯಂಗ್ ಇಂಡಿಯನ್ ಇನ್ನಿತರ ಷೇರುದಾರರಿಗೆ ನೋಟಿಸ್ ಜಾರಿ ಮಾಡಿತು. ಈ ಪ್ರಕರಣದಲ್ಲಿ 2015ರಲ್ಲಿ ಪಟಿಯಾಲ ಹೌಸ್ ಕೋರ್ಟ್ ಸೋನಿಯಾ ಮತ್ತು ರಾಹುಲ್ಗೆ ಜಾಮೀನು ನೀಡಿದೆ. ಈ ಮಧ್ಯೆ, ಪ್ರಕರಣವನ್ನು ವಜಾ ಮಾಡು ವಂತೆ ಆರೋಪಿಗಳ ಮನವಿಯನ್ನು ಸುಪ್ರೀಂಕೋರ್ಟ್ 2016ರಲ್ಲಿ ತಳ್ಳಿಹಾಕಿತು. ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, 2019ರ ಮೇನಲ್ಲಿ16.38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.
ಕಾಂಗ್ರೆಸ್ ಸ್ಪಷ್ಟನೆ ಏನು?: ಬಿಜೆಪಿ ರಾಜಕೀಯ ಹಗೆತನಕ್ಕೆ ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಪ್ರಕರಣದಲ್ಲಿ ಪಕ್ಷದ ನಾಯಕರನ್ನು ಬಲಿಪಶುವನ್ನಾಗಿ ಮಾಡಲಾಗದು. ದಿಟ್ಟತನದಿಂದ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಯಂಗ್ ಇಂಡಿಯನ್ ಲಾಭ ರಹಿತ, ಸೇವಾ ಸಂಸ್ಥೆ. ಇದರ ಷೇರುದಾರರು ಮತ್ತು ನಿರ್ದೇಶಕರು ಯಾವುದೇ ಲಾಭಾಂಶವನ್ನು ಪಡೆಯುತ್ತಿಲ್ಲ. ಈಗಲೂ ಎಜೆಎಲ್ ನ್ಯಾಷನಲ್ ಹೆರಾಲ್ಡ್ನ ಮುದ್ರಣ, ಪ್ರಕಾಶನ ಸಂಸ್ಥೆಯಾಗಿದೆ. ಹೀಗಾಗಿ ಆಸ್ತಿ ವರ್ಗಾವಣೆಯ ಪ್ರಶ್ನೆಯೇ ಬರುವುದಿಲ್ಲ. ಈ ಪ್ರಕರಣವನ್ನು ಬಿಜೆಪಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು, ಪತ್ರಿಕೆ ಕಟ್ಟಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಆಸ್ತಿ ದುರ್ಬಳಕೆ ದಾವೆ: ಎಜೆಎಲ್ನ ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಾಂಗ್ರೆಸ್ ನುಂಗಿಹಾಕಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ 2012ರಲ್ಲಿ ದಾವೆ ಹೂಡಿದರು. ಎಜೆಎಲ್ನ್ನು 90.21 ಕೋಟಿ ರೂಪಾಯಿಗೆ ಯಂಗ್ ಇಂಡಿಯನ್ ಲಿಮಿಟೆಡ್ ಎಂಬ ಸ್ವಯಂ ಸೇವಾ ಸಂಸ್ಥೆ ಖರೀದಿ ಮಾಡಿತು. ಇದಕ್ಕೆ ಕಾಂಗ್ರೆಸ್ 50 ಲಕ್ಷ ರೂಪಾಯಿಯನ್ನು ತನ್ನ ಖಜಾನೆಯಿಂದ ನೀಡಿತು. ನ್ಯಾಷನಲ್ ಹೆರಾಲ್ಡ್ನ ಆರ್ಥಿಕ ಪುನಶ್ಚೇತನಕ್ಕೆ ಯಂಗ್ ಇಂಡಿಯಾ ಕೋಟಿ ರೂಪಾಯಿ ದೇಣಿಗೆ ನೀಡಿತು.
ಪತ್ರಿಕಾ ಸಂಸ್ಥೆಯಾಗಿದ್ದ ಎಜೆಲ್ಗೆ ಆಗಿನ ಸರ್ಕಾರಗಳು ಉದಾತ್ತ ಉದ್ದೇಶದಿಂದ ನೀಡಿದ್ದ ಆಸ್ತಿಯನ್ನು ಯಂಗ್ ಇಂಡಿಯನ್ ಸಂಸ್ಥೆಯ ಮೂಲಕ ಕಬಳಿಸಲಾಗಿದೆ. ಎಜೆಎಲ್ ಆಸ್ತಿಯನ್ನು ದೆಹಲಿ, ಲಖನೌ, ಮುಂಬೈಗಳಲ್ಲಿ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಲಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ದಾವೆಯಲ್ಲಿ ಆರೋಪಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷೆನ್ಗಳಾದ 403 (ಆಸ್ತಿ ದುರ್ಬಳಕೆ), 406 (ವಿಶ್ವಾಸ ದ್ರೋಹ), 420 (ವಂಚನೆ) 12ಬಿ (ಕ್ರಿಮಿನಲ್ ಸಂಚು) ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಯಂಗ್ ಇಂಡಿಯಾ ಸಂಸ್ಥೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಗ ರಾಹುಲ್ ಗಾಂಧಿ ಶೇ.38ರಷ್ಟು ಷೇರುಹೊಂದಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಪತ್ರಕರ್ತರಾದ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಶೇ. 24ರಷ್ಟು ಷೇರುದಾರರು.