ನವದೆಹಲಿ : ಭಾರತವು ತನ್ನ ಅಣುಶಕ್ತಿ ಶಸ್ತ್ರಾಸ್ತ್ರಗಳ ಕೋಠಿಯನ್ನು ಇನ್ನಷ್ಟು ಬಲಪಡಿಸುತ್ತಿರುವಂತೆ ತೋರುತ್ತಿದೆ. ಈ ವರ್ಷದ ಜನವರಿಯಲ್ಲಿ ಇದ್ದಂತೆ 160 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದೆ ಎಂದು ಸ್ಟಾಕ್‌ಹೋಂನ ಸಂಸ್ಥೆಯೊಂದು ತಿಳಿಸಿದೆ.
ನವದೆಹಲಿ : ಭಾರತವು ತನ್ನ ಅಣುಶಕ್ತಿ ಶಸ್ತ್ರಾಸ್ತ್ರಗಳ ಕೋಠಿಯನ್ನು ಇನ್ನಷ್ಟು ಬಲಪಡಿಸುತ್ತಿರುವಂತೆ ತೋರುತ್ತಿದೆ. ಈ ವರ್ಷದ ಜನವರಿಯಲ್ಲಿ ಇದ್ದಂತೆ 160 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದೆ ಎಂದು ಸ್ಟಾಕ್‌ಹೋಂನ ಸಂಸ್ಥೆಯೊಂದು ತಿಳಿಸಿದೆ.
ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಸಿಪ್ರಿ) ಈ ಕುರಿತು ಹೇಳಿಕೆ ನೀಡಿದ್ದು, ನೆರೆಯ ರಾಷ್ಟ್ರ ಪಾಕಿಸ್ತಾನ ಕೂಡಾ ತನ್ನ ಅಣುಶಕ್ತಿ ಶಸ್ತ್ರಾಸ್ತ್ರ ಕೋಠಿಯನ್ನು ಬಲಪಡಿಸಲು ಆದ್ಯತೆ ನೀಡಿದೆ ಎಂದು ತಿಳಿಸಿದೆ.
ಇನ್ನೊಂದೆಡೆ, ಚೀನಾ 300ಕ್ಕೂ ಅಧಿಕ ಕ್ಷಿಪಣಿ ಉಡಾವಣಾ ತಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ದೊಡ್ಡ ಪ್ರಮಾಣದಲ್ಲೇ ಸಾಮರ್ಥ್ಯ ವೃದ್ಧಿಸುತ್ತಿದೆ. ಈ ವರ್ಷದ ಜನವರಿವರೆಗೆ ಚೀನಾದ ಬಳಿ 350 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಸಿಪ್ರಿ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ಬಳಿ ಇರುವ ಸಿಡಿತಲೆಗಳ ಸಂಖ್ಯೆ 2021ರಲ್ಲಿಯೂ 350 ಆಗಿತ್ತು ಎಂದು ಸಿಪ್ರಿ ಅಂದಾಜು ಮಾಡಿದ್ದರೂ, ನೂತನ ಉಡಾವಣಾ ತಾಣಗಳು 2021ರಲ್ಲಿ ಕಾರ್ಯಾರಂಭ ಮಾಡಿರುವ ಕಾರಣ ಬಳಕೆಗೆ ಹೆಚ್ಚಿನ ಸಂಖ್ಯೆ ಸಿಡಿತಲೆಗಳು ಹೆಚ್ಚಿರಬಹುದು ಎಂದು ಹೇಳಲಾಗಿದೆ.
ಸಿಪ್ರಿ ತನ್ನ ವರದಿಯಲ್ಲಿ ದಾಖಲಿಸಿರುವಂತೆ, ಭಾರತದ ಬಳಿ ಜನವರಿ 2021ರಲ್ಲಿ 156 ಅಣ್ವಸ್ತ್ರ ಸಿಡಿತಲೆಗಳಿದ್ದು, 2022ರಲ್ಲಿ 160ಕ್ಕೆ ಏರಿದೆ. ಪಾಕಿಸ್ತಾನದ ಬಳಿ ಜನವರಿ 2021ರಲ್ಲಿ 165 ಅಣ್ವಸ್ತ್ರ ಸಿಡಿತಲೆಗಳಿದ್ದವು. 2022ರಲ್ಲಿಯೇ ಅಷ್ಟೇ ಸಂಖ್ಯೆಯಲ್ಲಿ ಉಳಿದಿವೆ. ಉಭಯ ದೇಶಗಳು ತನ್ನ ಅಣುಶಕ್ತಿ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿವೆ. ನವೀನ ಪ್ರಯೋಗ ವ್ಯವಸ್ಥೆ ಅಭಿವೃದ್ಧಿಗೆ ಆದ್ಯತೆ ನೀಡಿವೆ ಎಂದು ತಿಳಿಸಿದೆ.
ಭಾರತವು ಎಂದಿಗೂ ತನ್ನ ಅಣುಶಕ್ತಿ ಶಸ್ತ್ರಾಸ್ತ್ರಗಳ ವಿವರ ಬಹಿರಂಗಪಡಿಸುವುದಿಲ್ಲ. ಉಭಯ ದೇಶಗಳು ಆಗಿಂದಾಗ್ಗೆ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ಕುರಿತು ಹೇಳಿಕೆ ನೀಡಿದರೂ, ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ವರದಿಯು ಉಲ್ಲೇಖಿಸಿದೆ.