ಬದಿಯಡ್ಕ : 'ಭಾವತೀವ್ರತೆಯಿಂದ ಮುಕ್ತರಾಗಲು ಬರವಣೆಗೆ ಸಹಕಾರಿ. ಕವಿತೆಯು ಕವಿಯ ಮನಸ್ಸಿನಲ್ಲಿ ಫಲ ಕಟ್ಟಿ, ಹುಟ್ಟಿ ಬೆಳೆಯುತ್ತದೆ. ಸಹೃದಯರ ಬೆಂಬಲವೇ ಕವಿಗಳಿಗೆ ಪ್ರೇರಣೆ. ಬದುಕಿನ ಬಹುಮುಖದ ತಲ್ಲಣಗಳು ಕವಿಯ ಕಲ್ಪನೆಗಳಿಗೆ ಜೀವ ತುಂಬಿ, ಸುಂದರ ರಚನೆಗಳಾಗುತ್ತವೆ' ಎಂದು ಹಿರಿಯ ಸಾಹಿತಿ ವಿಟ್ಲದ ಸೀತಾಲಕ್ಷ್ಮಿ ವರ್ಮ ಹೇಳಿದರು.
ಅವರು ಭಾನುವಾರ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಕವಿ, ಪತ್ರಕರ್ತ, ಪ್ರಜೋದಯ ದತ್ತಿ ನಿಧಿ ಪ್ರಶಸ್ತಿ ಪುರಸ್ಕøತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರ ಅಭಿಮಾನಿ ಬಳಗದಿಂದ ನಡೆದ ರಾಧಾಕೃಷ್ಣ ಕೆ ಉಳಿಯತ್ತಡ್ಕರ ಅಭಿನಂದನಾ ಕಾರ್ಯಕ್ರಮದ ಕವಿ ಕಾವ್ಯ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
'ಕವಿಯ ಭಾವವನ್ನು ಸವಿಯುವವರಿಲ್ಲದೇ ಹೋದಾಗ ಕವಿಗೆ ಬಲ ಬರುವುದಿಲ್ಲ. ಆದ್ದರಿಂದ ಕವಿಯು ಯಾವತ್ತೂ ಕೂಡಾ ಆಲಿಸುವವರಿಗಾಗಿ ಕಾತರಿಸುತ್ತಾನೆ. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಕ್ರಿಯಾಶೀಲತೆಯಿಂದ ಸಾಹಿತ್ಯ ಕ್ಷೇತ್ರ ಸಬಲವಾಗಬೇಕು. ಇದರಿಂದ ವ್ಯವಸ್ಥಿತ ಶಾಂತ ಸಮಾಜದ ನಿರ್ಮಾಣ ಸಾಧ್ಯ' ಎಂದು ಅವರು ಹೇಳಿದರು. ಕವಿಕಾವ್ಯ ಸಂವಾದದ ಸಮನ್ವಯಕಾರರಾಗಿ ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ಕಾರ್ತಿಕ್ ಪಡ್ರೆ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ವಿರಾಜ್ ಅಡೂರು, ದಯಾನಂದ ರೈ ಕಳುವಾಜೆ, ಪದ್ಮಾವತಿ ಏದಾರ್, ಚಂದ್ರಕಲಾ ನೀರಾಳ, ಅಪೂರ್ವ ಕಾರಂತ ಪುತ್ತೂರು, ನವೀನ್ ಕುಲಾಲ್ ಚಿಪ್ಪಾರು ಭಾಗವಹಿಸಿದ್ದರು. ವನಜಾಕ್ಷಿ ಚೆಂಬ್ರಕಾನ ಸ್ವಾಗತಿಸಿದರು. ಸುಂದರ ಬಾರಡ್ಕ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ನಂತರ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರ ಕವನಗಳಿಗೆ ರಾಗ ಸಂಯೋಜಿಸಿ ಗಾಯಕಿ ಪುತ್ತೂರಿನ ಅಪೂರ್ವ ಕಾರಂತ ಹಾಡಿದರು. ತಬಲಾವಾದನದಲ್ಲಿ ಆದ್ಯಂತ್ ಅಡೂರು ಸಹಕರಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ಮರಣೆಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.