ನವದೆಹಲಿ: ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ 'ಅಗ್ನಿವೀರ'ರಿಗೆ ಕೌಶಲ ಆಧಾರಿತ ಮೂರು ವರ್ಷಗಳ ವಿಶೇಷ ಪದವಿ ಕೋರ್ಸ್ ಅನ್ನು ಕೇಂದ್ರ ಶಿಕ್ಷಣ ಸಚಿವಾಲಯ ಆರಂಭಿಸಲಿದೆ.
ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ಈ ಪದವಿ ಕೋರ್ಸ್ ಅನ್ನು ಆರಂಭಿಸಲಿದ್ದು, ಇದಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ.
'ಅಗ್ನಿವೀರರು' ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್‌ನಲ್ಲಿ 'ಕ್ರೆಡಿಟ್'ಗಳಾಗಿ ಗುರುತಿಸಲಾಗುತ್ತದೆ. ಈ ಮೂಲಕ ಅವರು ತಮ್ಮ ಭವಿಷ್ಯದಲ್ಲಿ ತಮಗಿಷ್ಟವಾದ ನಾಗರಿಕ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ಈ ಕಾರ್ಯಕ್ರಮದಡಿ ಪದವಿ ಕೋರ್ಸ್‌ಗೆ ಅಗತ್ಯವಿರುವ ಶೇ 50ರಷ್ಟು 'ಕ್ರೆಡಿಟ್'ಗಳನ್ನು 'ಅಗ್ನಿವೀರರು' ಕೌಶಲ ತರಬೇತಿ ಮೂಲಕ (ತಾಂತ್ರಿಕ ಮತ್ತು ತಾಂತ್ರಿಕೇತರ) ಪಡೆಯುತ್ತಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ ಶೇ 50ರಷ್ಟು 'ಕ್ರೆಡಿಟ್'ಗಳು ಪದವಿ ಕೋರ್ಸ್ ಒಳಗೊಂಡಿರುವ ಭಾಷಾ ವಿಷಯಗಳು, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಗಣಿತ, ಶಿಕ್ಷಣ, ವಾಣಿಜ್ಯ, ಪ್ರವಾಸೋದ್ಯಮ, ವೃತ್ತಿಪರ ಅಧ್ಯಯನ, ಕೃಷಿ, 'ಜ್ಯೋತಿಷ', ಪರಿಸರ ಅಧ್ಯಯನ ಮತ್ತು ಇಂಗ್ಲಿಷ್ ಸಂವಹನ ಕೌಶಲದಿಂದ ದೊರೆಯಲಿವೆ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ರೂಪಿಸಲಾಗಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು ಹಾಗೂ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನ (ಎನ್‌ಎಸ್‌ಕ್ಯೂಎಫ್) ಮಾನದಂಡಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಅಲ್ಲದೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ), ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಪರಿಷತ್ತು (ಎನ್‌ಸಿವಿಇಟಿ) ಇದನ್ನು ಮಾನ್ಯ ಮಾಡಿವೆ.
ಈ ಪದವಿ ಕೋರ್ಸ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಹು ಆಯ್ಕೆಗಳನ್ನು ನೀಡುತ್ತದೆ. ಅಂದರೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗೆ ಪ್ರಮಾಣ ಪತ್ರ, ಎರಡು ವರ್ಷಗಳನ್ನು ಪೂರೈಸಿದವರಿಗೆ ಡಿಪ್ಲೊಮಾ ಹಾಗೂ ಮೂರು ವರ್ಷಗಳನ್ನೂ ಯಶಸ್ವಿಯಾಗಿ ಪೂರೈಸಿದವರಿಗೆ ಪದವಿ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯುಜಿಸಿ ನಿಯಮಗಳ ಪ್ರಕಾರ 'ಇಗ್ನೊ' ಬಿ.ಎ, ಬಿ.ಕಾಂ, ಬಿ.ಎ (ವೊಕೇಷನಲ್), ಬಿ.ಎ (ಪ್ರವಾಸೋದ್ಯಮ ನಿರ್ವಹಣೆ) ಪದವಿ ನೀಡಲಿದೆ. ಈ ಪದವಿಗಳಿಗೆ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.