ಚಂಡೀಗಢ: ಜಿಎಸ್‌ಟಿ ಜಾರಿಯಿಂದಾಗಿ ಆರ್ಥಿಕ ನಷ್ಟ ಅನುಭವಿಸುತ್ತಿರುವ ರಾಜ್ಯಗಳಿಗೆ ಪಾವತಿಸುವ ಜಿಎಸ್ ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಬುಧವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಸಭೆಯ ಬಳಿಕ ಮಾತನಾಡಿದ ಪುದುಚೇರಿ ಹಣಕಾಸು ಸಚಿವ ಕೆ ಲಕ್ಷ್ಮೀನಾರಾಯಣನ್ ಅವರು, ಎಲ್ಲಾ ರಾಜ್ಯಗಳು ಜಿಎಸ್ ಟಿ ಪರಿಹಾರ ವಿಸ್ತರಿಸುವಂತೆ ಕೋರಿದ್ದವು. ಆದರೆ ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ನಡೆಯಲಿರುವ ಮುಂದಿನ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್ ಟಿ ಪರಿಹಾರ ವಿಸ್ತರಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಜುಲೈ 1, 2017 ರಿಂದ ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ(GST) ಜಾರಿಗೊಳಿಸಿದ ನಂತರ ಆದಾಯ ನಷ್ಟ ಅನುಭವಿಸುವ ರಾಜ್ಯಗಳಿಗೆ, ಐದು ವರ್ಷಗಳವರೆಗೆ ಆದಾಯ ನಷ್ಟವನ್ನು ಸರಿದೂಗಿಸಲು ಜಿಎಸ್ ಟಿ ಪರಿಹಾರ ನೀಡಲು ನಿರ್ಧರಿಸಲಾಯಿತು. ಜಿಎಸ್ ಟಿ ಜಾರಿಗೆ ಬಂದು ನಾಳೆಗೆ ಐದು ವರ್ಷ ಪೂರ್ಣಗೊಳ್ಳಲಿದೆ. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಲ್ಲಿ ಎರಡು ವರ್ಷಗಳು ಕಳೆದುಹೋಗಿರುವುದರಿಂದ, ರಾಜ್ಯಗಳು ಜಿಎಸ್ ಟಿ ಪರಿಹಾರ ವಿಸ್ತರಣೆ ಮಾಡುವಂತೆ ಕೋರಿವೆ.