ಬದಿಯಡ್ಕ: ಕೊರೋನಾ ಹಿನ್ನೆಲೆಯಲ್ಲಿ ಶಾಲೆಯ ಮೆಟ್ಟಲೇರದ ಅನೇಕ ವಿದ್ಯಾರ್ಥಿಗಳು ಬುಧವಾರ ಶಾಲಾ ಪ್ರವೇಶ ಮಾಡಿದರು. ತನ್ಮೂಲಕ ಆನ್‍ಲೈನ್ ವಿದ್ಯೆಯಿಂದ ದೂರವಾಗಿ ಆಫ್ ಲೈನ್ ವಿದ್ಯೆಗೆ ಹೊಂದಿಕೊಳ್ಳಲು ಮೊಬೈಲ್ ಬದಿಗಿಟ್ಟು ಪುಸ್ತಕವನ್ನು ತೆರೆದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನವಾಗತ ವಿದ್ಯಾರ್ಥಿಗಳಿಗೆ ಆರತಿಯನ್ನು ಬೆಳಗಿ ತಿಲಕವಿಟ್ಟು ಅವರನ್ನು ಬರಮಾಡಿಕೊಳ್ಳಲಾಯಿತು. ಪುಟ್ಟ ಮಕ್ಕಳ ತರಗತಿಯನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ ಪೈ ಬದಿಯಡ್ಕ ದೀಪಬೆಳಗಿಸಿ ಶೈಕ್ಷಣಿಕ ವರ್ಷಕ್ಕೆ ಚಾಲನೆಯನ್ನು ನೀಡಿ ಹಿತನುಡಿಗಳನ್ನಾಡಿ, ಕಳೆದೆರಡು ವರ್ಷಗಳ ಕಷ್ಟಗಳನ್ನು ಮರೆತು ಪುಸ್ತಕದ ಲೋಕಕ್ಕೆ ತೆರಳಿ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಪಾಲಕರು ಪಾಲ್ಗೊಂಡಿದ್ದರು. ಶಾಲಾ ಅಧ್ಯಾಪಕ, ಅಧ್ಯಾಪಿಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದರು.