ನವದೆಹಲಿ :ತಂಬಾಕು ಉತ್ಪನ್ನಗಳ ಜಾಹೀರಾತಿಗಳನ್ನು ಕೂಡಲೇ ನಿಷೇಧಿಸುವಂತೆ ಆರೋಗ್ಯ ತಜ್ಞರು ಹಾಗೂ ಸೆಲೆಬ್ರಿಟಿಗಳು ಸರಕಾರವನ್ನು ಆಗ್ರಹಿಸಿದ್ದಾರೆ.
ವಿಶ್ವ ತಂಬಾಕು ರಹಿತ ದಿನದ ಮುನ್ನಾ ದಿನ ತಂಬಾಕು ನಿಯಂತ್ರಣ ಕಾನೂನು ಹಾಗೂ ನೀತಿಗಳನ್ನು ಕಠಿಣಗೊಳಿಸುವಂತೆ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಮಕ್ಕಳು ಹಾಗೂ ತಂಬಾಕು ಬಳಸದವರು ಕೂಡ ತಂಬಾಕು ಮಾರಾಟ ಕೇಂದ್ರ (ಪಿಒಎಸ್)ಕ್ಕೆ ಭೇಟಿ ನೀಡುತ್ತಾರೆ. ಅವರು ವ್ಯಸನಕ್ಕೆ ಒಳಗಾಗುವ ಅಪಾಯದಲ್ಲಿದ್ದಾರೆ. ಪಿಒಎಸ್ಗಳಿಗೆ ವಿನಾಯತಿ ನೀಡುವುದು ತಂಬಾಕು ಸಾಂಕ್ರಾಮಿಕವನ್ನು ಆಹ್ವಾನಿಸಿದಂತೆ ಎಂದು ಖ್ಯಾತ ಸಾಂಕ್ರಾಮಿಕ ರೋಗ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾತ್ ಲಹರಿಯಾ ಅವರು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಂಬಾಕು ಸೇವನೆಯಿಂದ ಜನರ ಆರೋಗ್ಯದ ಮೇಲಾಗುವ ಅಪಾಯದ ಬಗ್ಗೆಯೂ ಅವರು ಸರಕಾರದ ಗಮನ ಸೆಳೆದಿದ್ದಾರೆ.
ಸಾಂಕ್ರಾಮಿಕ ರೋಗದ ಸಂದರ್ಭ ತಂಬಾಕು ಬಳಕೆದಾರರು ಮಾರಣಾಂತಿಕ ಸೋಂಕಿಗೆ ಹೇಗೆ ಗುರಿಯಾಗುತ್ತಾರೆ ಎಂಬುದನ್ನು ತೋರಿಸುವ ವಿವಿಧ ಅಧ್ಯಯನಗಳನ್ನು ಅವರು ಉಲ್ಲೇಖಿಸಿದ್ದಾರೆ.
ಪ್ರತಿಯೊಂದು ಜೀವ ಕೂಡ ಅಮೂಲ್ಯವಾಗಿದೆ. ನಾವು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಪ್ರತಿವರ್ಷ 13 ಲಕ್ಷ ಭಾರತೀಯರನ್ನು ಕಳೆದುಕೊಳ್ಳುತ್ತಿದ್ದೇವೆ. ಕ್ಯಾನ್ಸರ್ ಅಲ್ಲದೆ, ಶ್ವಾಸಕೋಶದ ಕಾಯಿಲೆಗಳು, ಹೃದಯದ ರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿನಂತಹ ದೀರ್ಘ ಕಾಲದ ಮಾರಣಾಂತಿಕ ಪರಿಸ್ಥಿತಿಗಳಿಗೆ ತಂಬಾಕು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಧೂಮಪಾನಿಯಲ್ಲದವರ ಆರೋಗ್ಯಕ್ಕೆ ಅಪಾಯಕಾರಿ ಆಗಿರುವುದರಿಂದ ವಿಮಾನ ನಿಲ್ದಾಣ, ಹೊಟೇಲುಗಳು ಹಾಗೂ ರೆಸ್ಟೋರೆಂಟ್ಗಳಲ್ಲಿ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳನ್ನು ನಿಷೇಧಿಸುವ ಬೇಡಿಕೆಯನ್ನು ಅವರು ಬೆಂಬಲಿಸಿದ್ದಾರೆ.
ತಂಬಾಕು ಬಳಕೆಯಿಂದ ವಿಶ್ವದಾದ್ಯಂತ ಪ್ರತಿವರ್ಷ 80 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಸಿಗರೇಟು ಸೇದುವುದರಿಂದ ವಾತಾವರಣಕ್ಕೆ 84,000,000 ಟನ್ ಗಳು ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ತಂಬಾಕು ಸೇವನೆಯು ಮೂರು ವಿಭಿನ್ನ ರೀತಿಯ ಹಸಿರು ಮನೆ ಅನಿಲ ಹೊರ ಸೂಸಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.