ಪಟ್ನಾ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕಾರಣದಿಂದಾಗಿ ಕಾಶ್ಮೀರದಲ್ಲಿ ಉದ್ದೇಶಪೂರ್ವಕ ಹತ್ಯೆಗಳು ನಡೆಯುತ್ತಿವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಹೇಳಿದ್ದಾರೆ.
'ಚಿತ್ರಕ್ಕೆ ಬಿಹಾರದಲ್ಲಿಯೂ ತೆರಿಗೆ ವಿನಾಯಿತಿ ನೀಡಬೇಕು ಎಂದು ಬಿಜೆಪಿಯು ನಿತೀಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿತ್ತು.
'ಕೇಂದ್ರ ಸರ್ಕಾರವು ಸಿನಿಮಾ ನಿರ್ಮಾಪಕರ ಉಗ್ರ ನಂಟಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮಾಂಜಿ ಆಗ್ರಹಿಸಿದರು.
'ದಿ ಕಾಶ್ಮೀರ್ ಫೈಲ್ಸ್' ತಯಾರಿಕೆಯ ಉದ್ದೇಶವು 'ಕಾಶ್ಮೀರಿ ಬ್ರಾಹ್ಮಣ'ರಲ್ಲಿ (ಪಂಡಿತರು) ಭಯವನ್ನು ಉಂಟುಮಾಡುವುದಾಗಿದೆ. ಹೀಗೆ ಮಾಡಿದರೆ ಅವರು ಮರಳಿ ಕಣಿವೆಗೆ ಹಿಂತಿರುಗುವುದಿಲ್ಲ. ಕಣಿವೆಯಲ್ಲಿ ವಾಸಿಸುವ ಹಿಂದೂಗಳು ಸಹ ಭೀತಿಯಲ್ಲೇ ಬದುಕಬೇಕಾಗುತ್ತದೆ. ಬಿಹಾರಿ ಕಾರ್ಮಿಕರ ಉದ್ದೇಶಿತ ಹತ್ಯೆಗಳೂ ಕೂಡ ಇದೇ ಸಂಚಿನ ಭಾಗವಾಗಿದೆ. ನನ್ನ ಮಾತು ನಿಜವಾಗಿದೆ' ಎಂದು ಅವರು ಹೇಳಿದರು.
'ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕಿದ್ದರೆ, ಅದನ್ನು ಬಿಹಾರಿಗಳಿಗೆ ಹಸ್ತಾಂತರಿಸಬೇಕು. ಅಲ್ಲಿ ನಾವು ಶಾಂತಿಯನ್ನು ಪುನಃಸ್ಥಾಪಿಸುತ್ತೇವೆ' ಎಂದು ಮಾಂಝಿ ಹೇಳಿದರು!
ಗುರುವಾರ ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಕೊಂದಿದ್ದರು. ಮೃತ ದಿಲ್ಖಾಸ್, ಇಟ್ಟಿಗೆಗೂಡಿನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಜೊತೆಗೆ ಮತ್ತೊಬ್ಬ ವಲಸೆ ಕಾರ್ಮಿಕನಿಗೂ ಗುಂಡೇಟು ಬಿದ್ದಿತ್ತು.
ಅದಕ್ಕೂ ಮೊದಲು, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.