ಕೋಲಂಬೋ: ಪವನ ವಿದ್ಯುತ್ ಯೋಜನೆಯನ್ನು ಅದಾನಿ ಗ್ರೂಪ್‌ಗೆ ಮಂಜೂರು ಮಾಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ, ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್(ಸಿಇಬಿ) ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ರಾಜೀನಾಮೆ ನೀಡಿದ್ದಾರೆ.
ಎಂಎಂಸಿ ಫರ್ಡಿನಾಂಡೋ ಅವರ ಈ ಆರೋಪ ರಾಜಕೀಯ ವಿವಾದವನ್ನು ಹುಟ್ಟುಹಾಕಿತು. ಅಲ್ಲದೆ ಆ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಗಳು ಕೇಳಿಬಂದಿದ್ದು ಇದೀಗ ಅಂತಿಮವಾಗಿ ಅವರು ರಾಜೀನಾಮೆ ನೀಡಿ ಹೊರನಡೆದಿದ್ದಾರೆ.
ಶ್ರೀಲಂಕಾದ ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸೆಕೆರಾ ಅವರು ಟ್ವೀಟ್ ಮಾಡಿದ್ದಾರೆ. ಸಿಇಬಿ ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಅವರು ನನಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದೇನೆ. ಸಿಇಬಿಯ ನೂತನ ಅಧ್ಯಕ್ಷರಾಗಿ ಉಪಾಧ್ಯಕ್ಷರಾದ ನಳಿಂದ ಇಳಂಗೋಕೋನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಟ್ವೀಟಿಸಿದ್ದಾರೆ.
ನರೇಂದ್ರ ಮೋದಿ ಒತ್ತಡದಿಂದಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಅದಾನಿ ಗ್ರೂಪ್‌ಗೆ 500 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ನೀಡುವಂತೆ ಕೇಳಿಕೊಂಡರು ಎಂದು ಫರ್ಡಿನಾಂಡೋ ಸಾರ್ವಜನಿಕ ಉದ್ಯಮಗಳ ಸಂಸತ್ತಿನ ಕಾವಲು ಸಮಿತಿ(ಅಔPಇ)ಅಧಿವೇಶನದಲ್ಲಿ ಹೇಳಿದ್ದರು.
ನಂತರ, ಫರ್ಡಿನಾಂಡೋ ತಾನು ಹೇಳಿದ್ದು ಸರಿಯಲ್ಲ ಎಂದು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರು.
ಎಂಎಂಸಿ ಫರ್ಡಿನಾಂಡೋ ಅವರ ಹೇಳಿಕೆಯನ್ನು ರಾಜಪಕ್ಸೆ ಟ್ವೀಟ್ ಮೂಲಕ ತಿರಸ್ಕರಿಸಿದ್ದರು. ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಘಟಕಕ್ಕೆ ಈ ಯೋಜನೆಯನ್ನು ನೀಡುವ ಅಧಿಕಾರವನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಸಂವಹನವು ಅನುಸರಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಟ್ವೀಟಿಸಿದ್ದರು.