ತಿರುವನಂತಪುರ: ಶೈಕ್ಷಣಿಕ ವರ್ಷದ ಮೊದಲ ದಿನವೇ ರಾಜಧಾನಿಯ ಶಾಲೆಗಳಲ್ಲಿ ಶಿಕ್ಷಕರ ವಿರುದ್ದ ಪ್ರತಿಭಟನೆ ವ್ಯಕ್ತವಾಗಿದೆ. ಪಾಲಕರ ಒಪ್ಪಿಗೆ ಅಥವಾ ಅರಿವಿಲ್ಲದೆ ಮಕ್ಕಳ ಶಾಲೆಯನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ವನವಾಸಿ ವಿದ್ಯಾರ್ಥಿಗಳಿಗಾಗಿ ತಿರುವನಂತಪುರಂನಲ್ಲಿರುವ ಕುಟ್ಟಿಚಲ್ ಜಿ ಕಾರ್ತಿಕೇಯನ್ ಸ್ಮಾರಕ ಮಾದರಿ ವಸತಿ ಶಾಲೆಯ ಪೋಷಕರು ಈ ದೂರು ದಾಖಲಿಸಿದ್ದಾರೆ. ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಯಡಿ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಪೋಷಕರಿಗೆ ತಿಳಿಯದಂತೆ ಶಾಲೆಗೆ ಸ್ಥಳಾಂತರಿಸಲಾಗಿದೆ. ಐದು ದಿನಗಳ ಹಿಂದೆ ಶಾಲೆಯ ವಾಟ್ಸ್ ಆಪ್ ಗ್ರೂಪ್‍ಗೆ ಬಂದ ಸಂದೇಶದಲ್ಲಿ ಸ್ಥಳಾಂತರದ ಬಗ್ಗೆ ತಿಳಿಸಲಾಗಿದೆ. ಶಾಲೆಯ ಅಧಿಕಾರಿಗಳ ಈ ಕೊನೆಯ ಕ್ಷಣದ ಬದಲಾವಣೆ ಪೋಷಕರನ್ನು ಚಿಂತೆಗೀಡು ಮಾಡಿದೆ. ನಂತರ ಬುಡಕಟ್ಟು ಪ್ರಚಾರಕರು ಕೆಲ ಮನೆಗಳಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ನೀಡಿದರು. ಈ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ವರ್ಷದ ಕೊನೆಗೆ ಶಾಲೆ ಮುಚ್ಚುವಾಗ ಮಕ್ಕಳನ್ನು ಅದೇ ಸ್ಥಳಕ್ಕೆ ಕರೆತರುವ ಪ್ರಸ್ತಾವನೆ ಇತ್ತು. ಆದರೆ ಕೊನೆಯ ಕ್ಷಣದ ನಿರ್ಧಾರ ಬದಲಿಸಿರುವುದರಿಂದ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸುವ ಅವಕಾಶವೂ ಇಲ್ಲದಂತಾಗಿದೆ ಎಂದು ಪೋಷಕರು ದೂರಿದ್ದಾರೆ.
ಆದರೆ, ಸ್ಥಳಾವಕಾಶದ ಕೊರತೆಯಿಂದ ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಹೊಸ ಕಟ್ಟಡ ಬಾಡಿಗೆಗೆ ಲಭ್ಯವಾದ ತಕ್ಷಣ ಮಕ್ಕಳನ್ನು ವಾಪಸ್ ಕರೆತರಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿರ್ದೇಶಕರು ತಿಳಿಸಿದ್ದಾರೆ. ಆದರೆ ನ್ಯಾಯಕ್ಕಾಗಿ ಮಕ್ಕಳ ಹಕ್ಕುಗಳ ಆಯೋಗ, ಮಾನವ ಹಕ್ಕುಗಳ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಮೊರೆ ಹೋಗಲು ಪೋಷಕರು ಸಿದ್ಧತೆ ನಡೆಸಿದ್ದಾರೆ.