ಗೆಲುವಿನ ಹಾದಿಗೆ ಮರಳಬೇಕಿದ್ದರೆ ಕಾಂಗ್ರೆಸ್ ಪಕ್ಷವು ಗಮನಹರಿಸಬೇಕಾದ ವಿಚಾರಗಳು ಹತ್ತು- ಹಲವು...
ಚುನಾವಣೆಯಲ್ಲಿನ ಗೆಲುವು ಮಾತ್ರವೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷವನ್ನು ಪ್ರಸ್ತುತ ವಾಗಿ ಇರಿಸುತ್ತದೆ. 137 ವರ್ಷಗಳ ಸಮೃದ್ಧ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ತಿಳಿಯದ ವಿಚಾರವೇನೂ ಅಲ್ಲ.
ಪ್ರತೀ ಚುನಾವಣಾ ಸೋಲಿನ ಬಳಿಕವೂ ಆತ್ಮಾವಲೋಕನ ಮತ್ತು ಸೋಲಿನ ಕಾರಣ ಕಂಡು ಕೊಳ್ಳಲು ಸಮಿತಿ ರಚಿಸುವುದು ಕಾಂಗ್ರೆಸ್‌ನಲ್ಲಿ ಸಾಮಾನ್ಯ. ಏನು ಆತ್ಮಾವಲೋಕನ ನಡೆಯಿತು ಮತ್ತು ಸಮಿತಿಯು ಕೊಟ್ಟ ವರದಿಯಲ್ಲಿ ಏನಿದೆ ಎಂಬುದು ಬಹಿರಂಗ ಆಗಿದ್ದೇ ಇಲ್ಲ. ಜತೆಗೆ, ಈ ಆತ್ಮಾವಲೋಕನ ಮತ್ತು ವರದಿಯ ಪರಿಣಾಮ ಪಕ್ಷದ ಕಾರ್ಯಶೈಲಿಯಲ್ಲಿ ಕಾಣಿಸಿಕೊಂಡದ್ದೂ ಇಲ್ಲ. ಆದರೆ, ಈ ಬಾರಿ ರಾಜಸ್ಥಾನದ ಉದಯಪುರದಲ್ಲಿ ನಡೆಸಿದ 'ನವಸಂಕಲ್ಪ ಚಿಂತನ ಶಿಬಿರ'ವು ಕಾಂಗ್ರೆಸ್ ನಾಯಕರು ಹೆಚ್ಚು ಗಂಭೀರವಾಗಿದ್ದಾರೆ ಎಂಬು ದನ್ನು ತೋರಿಸುವಂತಿದೆ. ಪಕ್ಷದ ಮುಂದಿರುವ ಸವಾಲುಗಳೇನು ಮತ್ತು ಪಕ್ಷದ ದೌರ್ಬಲ್ಯಗಳೇನು ಎಂಬುದರ ಬಗ್ಗೆ ಚಿಂತನ ಮಂಥನ ನಡೆದಿದೆ. 'ಒಂದು ಕುಟುಂಬಕ್ಕೆ ಒಂದೇ ಟಿಕೆಟ್', '50 ವರ್ಷದ ಒಳಗಿನವರಿಗೆ ಪಕ್ಷದ ಹುದ್ದೆಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಟಿಕೆಟ್‌ನಲ್ಲಿ ಶೇ 50ರಷ್ಟು ಮೀಸಲು' ಮುಂತಾದ ಮಹತ್ವದ ತೀರ್ಮಾನಗಳನ್ನೂ ಕೈಗೊಳ್ಳಲಾಗಿದೆ. ಆದರೆ, ಗೆಲುವಿನ ಹಾದಿಗೆ ಮರಳಬೇಕಿದ್ದರೆ ಪಕ್ಷವು ಗಮನಹರಿಸಬೇಕಾದ ವಿಚಾರಗಳು ಇನ್ನೂ ಹಲವಿವೆ. 'ಪ್ರಾದೇಶಿಕ ಪಕ್ಷಗಳಿಗೆ ಸಿದ್ಧಾಂತವೇ ಇಲ್ಲ' ಮತ್ತು 'ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಸೋಲಿಸಲಾಗದು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಿಬಿರದಲ್ಲಿ ಹೇಳಿದ್ದಾರೆ. ಇವು ದೂರಗಾಮಿ ಪರಿಣಾಮ ಉಂಟು ಮಾಡಬಹುದಾದ ಹೇಳಿಕೆಗಳು. ಬಿಜೆಪಿಯನ್ನು ಏಕಾಂಗಿಯಾಗಿ ಸೋಲಿಸುವ ಶಕ್ತಿ ತನಗೆ ಈಗ ಇಲ್ಲ ಎಂಬ ವಾಸ್ತವವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ದೇಶದಾದ್ಯಂತ ಅಸ್ತಿತ್ವ ಇರುವ ಪ್ರಾದೇಶಿಕ ಪಕ್ಷ ಎಂಬ ಸ್ಥಿತಿಗೆ ಕಾಂಗ್ರೆಸ್ ಈಗ ಬಂದಿದೆ. ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿಯನ್ನು ಸೋಲಿಸಲಾಗದು ಎಂಬುದು ನಿಜ. ಅದೇ ರೀತಿ, ಪ್ರಾದೇಶಿಕ ಪಕ್ಷಗಳ ಬೆಂಬಲ ಇಲ್ಲದೆ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೂ ಸಾಧ್ಯ ಇಲ್ಲ. ಹಾಗೆಯೇ ಸಿದ್ಧಾಂತದ ವಿಚಾರದಲ್ಲಿಯೂ ಕಾಂಗ್ರೆಸ್‌ನಲ್ಲಿ ಇರುವ ಗೊಂದಲಗಳು ಕಡಿಮೆ ಏನಲ್ಲ. ಕಾಂಗ್ರೆಸ್ ಯಾವ ಸಿದ್ಧಾಂತ ಅನುಸರಿಸಬೇಕು ಎಂಬುದರ ಬಗ್ಗೆ ಚಿಂತನ ಶಿಬಿರದಲ್ಲಿಯೂ ಚರ್ಚೆಯಾಗಿದೆ. ಬಿಜೆಪಿಯನ್ನು ಸೋಲಿಸಬೇಕಿದ್ದರೆ ಹಿಂದುತ್ವವಾದದ ಪರ ಇರಬೇಕು ಎಂಬ ಉತ್ತರ ಭಾರತದ ಕೆಲವು ಮುಖಂಡರ ಪ್ರತಿಪಾದನೆಯನ್ನು ದಕ್ಷಿಣದ ಮುಖಂಡರು ಒಪ್ಪಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ, ಕಾರ್ಯಶೈಲಿಯಷ್ಟೇ ಬದಲು, ಜಾತ್ಯತೀತ ನಿಲುವು ಹಾಗೆಯೇ ಉಳಿಯಲಿದೆ ಎಂಬ ನಿಲುವಿಗೆ ಚಿಂತನ ಶಿಬಿರವು ಬಂದಿದೆ. ಆದರೆ, ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ರಾಹುಲ್ ಅವರು 'ಮೃದು ಹಿಂದುತ್ವ'ವನ್ನು ಅನುಸರಿಸಿದ್ದಾರೆ. ಹಾಗಿದ್ದರೆ ಕಾಂಗ್ರೆಸ್‌ನ ಸಿದ್ಧಾಂತ ಯಾವುದು?
ಕಾಂಗ್ರೆಸ್ ಪಕ್ಷಕ್ಕೆ ಜನರ ಜತೆಗಿನ ಸಂಪರ್ಕವೇ ಕಡಿದುಹೋಗಿದೆ ಎಂಬ ವಾಸ್ತವವು ರಾಹುಲ್ ಅವರಿಗೆ ಅರ್ಥವಾಗಿದೆ. ಹಾಗಾಗಿಯೇ ಸಂವಹನವನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ಯಾತ್ರೆಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಸಂವಹನವಷ್ಟೇ ಎಲ್ಲ ವನ್ನೂ ಮಾಡುವುದಿಲ್ಲ. ಪಕ್ಷದ ನಿಲುವು, ಸಿದ್ಧಾಂತ ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ತಳ ಮಟ್ಟದ ಕಾರ್ಯಕರ್ತರಿಂದ ಹಿಡಿದು ತುತ್ತತುದಿಯಲ್ಲಿರುವ ನಾಯಕರವರೆಗೆ ಎಲ್ಲರೂ ಸಜ್ಜಾಗಬೇಕು. ಜನರ ಅಗತ್ಯಗಳ ಪರವಾಗಿ ಹೋರಾಟಗಳನ್ನು ಸಂಘಟಿಸಿ, ಅಂತಹ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಮೂಲಕವೂ ಜನರ ಜತೆಗೆ ಸಂಪರ್ಕ ಸಾಧ್ಯ ಎಂಬುದನ್ನು ಪಕ್ಷವು ಅರ್ಥ ಮಾಡಿ ಕೊಳ್ಳಬೇಕು. ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳು ಇದ್ದಾಗಲೂ ಕಾಂಗ್ರೆಸ್ ಪಕ್ಷವು ದೊಡ್ಡ ಮಟ್ಟದ ಹೋರಾಟವನ್ನು ಸಂಘಟಿಸಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ, ಕೇಂದ್ರ ಮತ್ತು ರಾಜ್ಯಗಳಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ತಾನು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ್ದೇನೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕು. ಜನರಿಗಾಗಿ ಬೀದಿಗಿಳಿಯಲು ಹಿಂಜರಿದರೆ, ಪಕ್ಷಕ್ಕೆ ಮತ ಹಾಕಲು ಜನರು ಹಿಂದೇಟು ಹಾಕುತ್ತಾರೆ ಎಂಬುದು ಅರಿವಾಗದಿದ್ದರೆ ಪಕ್ಷದ ಪುನಶ್ಚೇತನ ಸಾಧ್ಯವಿಲ್ಲ.