ನವದೆಹಲಿ: ವಿಮಾನ ಪ್ರಯಾಣದ ಸಮಯದಲ್ಲಿ ಸಹ ಪ್ರಯಾಣಿಕರ ವರ್ತನೆಯಿಂದ ವ್ಯಕ್ತಿಯೊಬ್ಬರು ದಿಗ್ಭ್ರಮೆಗೊಂಡು ಅವರ ವರ್ತನೆಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಹಲವರು ಸಹ ಪ್ರಯಾಣಿಕರ ವರ್ತನೆಯಿಂದ ಗರಂ ಆಗಿದ್ದಾರೆ.
ಪಾಲ್ ಸ್ಟೋಥಾರ್ಡ್ ಎಂಬ ವ್ಯಕ್ತಿ ಎಮಿರೇಟ್ಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಪಕ್ಕದ ಸೀಟ್ ನಲ್ಲಿ ಕೂತಿದ್ದ ಮಹಿಳೆಯು ತನ್ನ ಮುಂಭಾಗದ ಸೀಟಿನ ಮೇಲೆ ತನ್ನ ಪಾದಗಳನ್ನು ಹಾಕಿ ವಿಶ್ರಮಿಸುತ್ತಿರುವುದನ್ನು ಗಮನಿಸಿದ್ದಾರೆ. 'ನನ್ನ ವಿಮಾನದಲ್ಲಿ ನನ್ನ ಪಕ್ಕದಲ್ಲಿರುವ ವ್ಯಕ್ತಿ' ಎಂಬ ಶೀರ್ಷಿಕೆಯೊಂದಿಗೆ ಅವರು ಮಹಿಳೆಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಮಹಿಳಾ ಪ್ರಯಾಣಿಕರು ಒಂದು ಜೊತೆ ಭಾರವಾದ ಬೂಟುಗಳನ್ನು ಧರಿಸಿ, ತನ್ನ ಪಾದಗಳನ್ನು ತನ್ನ ಮುಂಭಾಗದ ಸೀಟಿನ ಹೆಡ್‌ರೆಸ್ಸ್ ನಲ್ಲಿ ವಿಶ್ರಾಂತಿ ಮಾಡುವುದನ್ನು ತೋರಿಸಿದೆ. ಪಾಲ್ ಜೂನ್ 27ರಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಶೀಘ್ರದಲ್ಲೇ ವೈರಲ್ ಆಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮಹಿಳೆಯ ವರ್ತನೆಯನ್ನು ಖಂಡಿಸಿದ್ದು 'ಅಸಹ್ಯ' ಮತ್ತು 'ಭಯಾನಕ' ಎಂದಿದ್ದಾರೆ.
ವಿಮಾನದಲ್ಲಿನ ಪ್ರಯಾಣಿಕರು ಈ ರೀತಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ ವಿಮಾನದ ಕಿಟಕಿ ಸೀಟಿಗೆ ಹೋಗಲು ಮಹಿಳೆಯೊಬ್ಬರು ಪ್ರಯಾಣಿಕರು ಕುಳಿತಿದ್ದ ಸೀಟ್ ಮೇಲೆ ನಡೆದು ಹೋಗುತ್ತಿದ್ದ ಫೋಟೋ ಟೀಕೆಗೆ ಗುರಿಯಾಗಿತ್ತು.