ಕಾಸರಗೋಡು: ಮೀನುಗಾರಿಕಾ ವಲಯದ ರಕ್ಷಣೆಗಾಗಿ ಕೇರಳ ಪ್ರದೇಶ ಮೀನುಗಾರಿಕಾ ಕಾರ್ಮಿಕರ ಸಂಘದ (ಬಿಎಂಎಸ್) ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಎದುರು ಧರಣಿ ನಡೆಯಿತು. ಮೀನುಗಾರಿಕಾ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ದೇಶಾದ್ಯಂತ ಜೂ 5ರಿಂದ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಧರಣಿ ಆಯೋಜಿಸಲಾಗಿತ್ತು. 60ವರ್ಷ ದಾಟಿದ ಮೀನುಕಾರ್ಮಿಕರಿಗೆ ಪ್ರತಿ ತಿಂಗಳು 5ಸಾವಿರ ರೂ. ಪಿಂಚಣಿ ನೀಡಬೇಕು, ಟ್ರೋಲಿಂಗ್ ನಿಷೇಧ ಕಾಲಾವಧಿಯಲ್ಲಿ ಉಚಿತ ಪಡಿತರ ಹಾಗೂ ತಪಾ 10ಸಾವಿರ ರೂ. ಪರಿಹಾರ ನೀಡಬೇಕು, ಅಳಿವೆಗಳಲ್ಲಿನ ಹೂಳು ಸಕಾಲದಲ್ಲಿ ತೆರವುಗೊಳಿಸಬೇಕು, ಕಾಸರಗೋಡಿನ ಬಂದರು ಕಾಮಗಾರಿ ಶೀಘ್ರ ಪೂರ್ತಿಗೊಳಿಸಬೇಕು, ಕರಾವಳಿ ಸಂರಕ್ಷಣಾ ಕಾನೂನಿನಿಂದ ಮೀನುಗಾರರನ್ನು ಹೊರತುಪಡಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ವಿ. ಬಾಲಕೃಷ್ಣ ಧರಣಿ ಉದ್ಘಾಟಿಸಿದರು. ಮೀನುಗಾರರ ಸಂಘದ ರಾಜ್ಯ ಕಾರ್ಯದರ್ಶಿ ದಿನೇಶ್, ಬಿಎಂಎಸ್ ನೇತಾರರಾದ ಅನಿಲ್‍ಬಿ.ನಾಯರ್, ಕೆ.ಎಸ್ ಶ್ರೀನಿವಾಸನ್, ರಿಜೇಶ್, ಸುರೇಶ್ ದೇಳಿ, ಶಿವನ್ ತಾಳಿಪಡ್ಪು ಮುಂತಾದವರು ಉಪಸ್ಥಿತರಿದ್ದರು.