HEALTH TIPS

ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ: ಭಾರತೀಯ ಸಂಪಾದಕರ ಕೂಟ ಬೇಸರ

 ನವದೆಹಲಿ: ಕೆಲವು ಸಮುದಾಯಗಳು ಮತ್ತು ಅವರ ಧಾರ್ಮಿಕ ನಂಬಿಕೆಗಳ ವಿರುದ್ಧ ನೀಡಲಾದ ಅವಹೇಳನಕಾರಿ ಹೇಳಿಕೆಗೆ ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳು ಅವಕಾಶ ಮಾಡಿಕೊಟ್ಟಿದ್ದು ಹೊಣೆಗೇಡಿ ನಡೆಯಾಗಿದೆ ಎಂದು ಭಾರತೀಯ ಸಂಪಾದಕರ ಕೂಟವು ಹೇಳಿದೆ.

ಪ್ರವಾದಿ ಮಹಮ್ಮದರ ಕುರಿತು ಬಿಜೆಪಿಯ ನೂಪುರ್ ಶರ್ಮಾ ಅವರು ನೀಡಿದ್ದ ಅವಹೇಳನಕಾರಿ ಹೇಳಿಕೆ ಮತ್ತು ಆನಂತರದ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಪಾದಕರ ಕೂಟವು, ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ. ಕೂಟವು, ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

'ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳ ಈ ಹೊಣೆಗೇಡಿ ನಡೆಯಿಂದ ತೀವ್ರ ಬೇಸರವಾಗಿದೆ. ಆಡಳಿತಾರೂಢ ಪಕ್ಷದ ವಕ್ತಾರರು ನೀಡಿದ ಹೇಳಿಕೆಯಿಂದ ಕಾನ್ಪುರದಲ್ಲಿ ಗಲಭೆ ನಡೆದಿದೆ. ಇಂತಹ ಹೇಳಿಕೆಯಿಂದ ಹಲವು ದೇಶಗಳು, ಅಸಾಧಾರಣ ಮತ್ತು ಆಕ್ರೋಶದ ಪ್ರತಿಕ್ರಿಯೆ ನೀಡಿವೆ. ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಭಾರತದ ಬದ್ಧತೆಯನ್ನು ಆ ದೇಶಗಳು ಪ್ರಶ್ನಿಸಿವೆ' ಎಂದು ಕೂಟವು ಹೇಳಿದೆ.

'ಜಾತ್ಯತೀತತೆಗೆ ಸಂಬಂಧಿಸಿದಂತೆ ದೇಶದ ಸಾಂವಿಧಾನಿಕ ಬದ್ಧತೆ, ಪತ್ರಕರ್ತರಿಗೆ ಇರಬೇಕಾದ ನೈತಿಕತೆ ಮತ್ತು ಕೋಮುವಾದದ ಸಂದರ್ಭದಲ್ಲಿ ಅನುಸರಿಸಬೇಕೆಂದು ಭಾರತೀಯ ಪತ್ರಿಕಾ ಮಂಡಳಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಈ ಸುದ್ದಿವಾಹಿನಿಗಳು ಗಮನದಲ್ಲಿ ಇರಿಸಿಕೊಳ್ಳಬೇಕಿತ್ತು. ಆಗ, ದೇಶಕ್ಕೆ ಈ ರೀತಿಯ ಮುಜುಗರ ಆಗುವುದನ್ನು ತಡೆಯಬಹುದಾಗಿತ್ತು' ಎಂದು ಕೂಟವು ಹೇಳಿದೆ.

'ಆದರೆ, ಕೆಲವು ಸುದ್ದಿವಾಹಿನಿಗಳು ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ಆ ಮೂಲಕ ಲಾಭವನ್ನು ಹೆಚ್ಚಿಸಿಕೊಳ್ಳುವ ಆಸೆಯಿಂದ ಹೀಗೆ ಮಾಡಿವೆ. ತನ್ನ ಕೇಳುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ರೇಡಿಯೊ ರವಾಂಡ ಪ್ರಸಾರ ಮಾಡಿದ್ದ ಕಾರ್ಯಕ್ರಮದಿಂದ ಆಫ್ರಿಕಾದಲ್ಲಿ ನರಮೇಧ ನಡೆದಿತ್ತು. ಈ ವಾಹಿನಿಗಳ ನಡೆಯೂ ರೇಡಿಯೊ ರವಾಂಡದಿಂದಲೇ ಸ್ಫೂರ್ತಿ ಪಡೆದಂತಿದೆ' ಎಂದು ಕೂಟವು ಆರೋಪಿಸಿದೆ.

'ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳು ವಿಭಜಕ ಮತ್ತು ವಿಷಪೂರಿತ ಧನಿಗಳಿಗೆ ತಮ್ಮ ವೇದಿಕೆಯಲ್ಲಿ ಸಮ್ಮತಿ ನೀಡುವ ಮೂಲಕ ದೇಶದ ವಿವಿಧ ಕೋಮುಗಳ ನಡುವಣ ಅಂತರ ಹೆಚ್ಚುವಂತೆ ಮಾಡಿವೆ. ಅಂತಹ ವಾಹಿನಿಗಳು ಒಂದು ಕ್ಷಣ ನಿಂತು, ತಾವು ಏನು ಮಾಡಿದ್ದೇವೆ ಎಂಬುದನ್ನು ಅವಲೋಕಿಸಬೇಕು ಎಂದು ನಾವು ಆಗ್ರಹಿಸುತ್ತೇವೆ' ಎಂದು ಕೂಟವು ಒತ್ತಾಯಿಸಿದೆ. 'ಪ್ರಸಾರ ಮತ್ತು ಮಾಧ್ಯಮ ಮೇಲ್ವಿಚಾರಣ ಮಂಡಳಿಗಳು ಇನ್ನು ಮುಂದೆ ಇಂತಹವು ಮರುಕಳಿಸುವದನ್ನು ತಡೆಯಬೇಕು' ಎಂದು ಕೂಟವು ಆಗ್ರಹಿಸಿದೆ.

ಬೆದರಿಕೆ ಪತ್ರ ವೈರಲ್
ಪ್ರವಾದಿ ಮಹಮ್ಮದರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ ದೇಶದ ಪ್ರಮುಖ ನಗರಗಳಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸುತ್ತೇವೆ ಎಂದು ಅಲ್‌ ಖೈದಾ ಬೆದರಿಕೆ ಒಡ್ಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಅಲ್‌ ಖೈದಾ ಹೊರಡಿಸಿದೆ ಎನ್ನಲಾದ ಬೆದರಿಕೆ ಪತ್ರದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 'ಪ್ರವಾದಿ ಮಹಮ್ಮದರ ವಿರುದ್ಧ ಹೇಳಿಕೆ ನೀಡಿದ ಹಿಂದೂ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ. ದೆಹಲಿ, ಮುಂಬೈ, ಅಹಮದಾಬಾದ್‌ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸುತ್ತೇವೆ' ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಪತ್ರವನ್ನು ಯಾರು, ಯಾರಿಗೆ ಕಳುಹಿಸಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಸರ್ಕಾರವೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಭದ್ರತೆ ಬಿಗಿಗೊಳಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ' ಎಂದು ರಾಯಿಟರ್ಸ್‌ ಹೇಳಿದೆ.

ನೂಪುರ್‌ಗೆ ಆನ್‌ಲೈನ್‌ನಲ್ಲಿ ಬೆಂಬಲ
ಉಚ್ಚಾಟನೆಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಮುಸ್ಲಿಂ ದೇಶಗಳು ತಿರುಗುಬಿದ್ದಿದ್ದರೆ, ಭಾರತದ ಬಲಪಂಥೀಯ ಸದಸ್ಯರು ಆನ್‌ಲೈನ್‌ನಲ್ಲಿ ಬೆಂಬಲ ಸೂಚಿಸಿದ್ದಾರೆ. #ಶೇಮ್‌ಲೆಸ್‌ಬಿಜೆಪಿ, #ಐಸಪೋರ್ಟ್‌ನೂಪರ್‌ಶರ್ಮಾ ಹೆಸರಿನ ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿವೆ. ಕೆಲವು ಸ್ಥಳೀಯ ಬಿಜೆಪಿ ಮುಖಂಡರು ನೂಪುರ್ ವಿರುದ್ಧದ ಕ್ರಮದ ಬಗ್ಗೆ ಫೇಸ್‌ಬುಕ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಕೆಲವು ಬೆಂಬಲಿಗರು ಬಿಜೆಪಿ ತೆಗೆದುಕೊಂಡ ನಿಲುವು ದುರ್ಬಲವಾಗಿದೆ ಎಂದು ಭಾವಿಸಿದ್ದಾರೆ.

ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ನೂಪುರ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಸಂಸದ ಮಹೇಶ್ ಜೇಠ್ಮಲಾನಿ ಅವರು ನೂಪುರ್ ಅವರು ಮೂಲಭೂತವಾದಿ ರಾಜಕಾರಣಿ ಅಲ್ಲ ಎಂದಿದ್ದಾರೆ. 'ನೂಪುರ್ ಅವರು ಪ್ರಚೋದನೆಗೆ ಒಳಗಾಗಿ ಅಸೂಕ್ಷ್ಮ ಹೇಳಿಕೆ ನೀಡಿದ್ದಾರೆ' ಎಂದು ಜೇಠ್ಮಲಾನಿ ಟ್ವೀಟ್ ಮಾಡಿದ್ದಾರೆ

ಬಿಜೆಪಿ ನಾಯಕರ ಮೌನ: ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಂಡ ಬಳಿಕ, ಪ್ರವಾದಿ ಪ್ರಕರಣದಲ್ಲಿ ಹೇಳಿಕೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಮಾತನಾಡದಂತೆ ಬಿಜೆಪಿಯಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಆದರೂ, ವಕ್ತಾರರ ವಿರುದ್ಧ ಪಕ್ಷ ತೆಗೆದುಕೊಂಡಿರುವ ಶಿಸ್ತುಕ್ರಮದ ಕುರಿತು ಹೇಳಿಕೆ ನೀಡುವುದರಿಂದ ಮುಖಂಡರು ಹಿಂದೆ ಸರಿಯುತ್ತಿದ್ದಾರೆ.

ಬಿಜೆಪಿ ಮುಖಂಡನ ಬಂಧನ
ಕಾನ್ಪುರ: ಕಾನ್ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಇತರೆ 12 ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದಲ್ಲಿ, ಬಿಜೆಪಿ ಯುವಮೋರ್ಚಾದ ಮಾಜಿ ಜಿಲ್ಲಾ ಕಾರ್ಯದರ್ಶಿ ಹರ್ಷಿತ್ ಶ್ರೀವಾಸ್ತವ್ ಅವರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಪೊಲೀಸರು ಪ್ರಕಟಿಸಿದ್ದ ಪೋಸ್ಟರ್‌ನಲ್ಲಿ ಭಾವಚಿತ್ರ ಇದ್ದ 16 ವರ್ಷದ ಹುಡುಗನೊಬ್ಬ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries