ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ 6, 7, 8 ವಾರ್ಡುಗಳ ವ್ಯಾಪ್ತಿಯ ರಾಗಂ ಜಂಕ್ಷನ್ ನಿಂದ ಅಂಬಿತ್ತಡಿ ತನಕ ಮೊದಲು ಬೀದಿನಾಯಿಗಳ ಕಾಟ ಅಧಿಕವಾಗಿದ್ದರೂ ಇದೀಗ ಬೆಳಗ್ಗೆ ಸಾಕು ನಾಯಿಗಳ ಕಾಟ ಅಧಿಕವಾಗಿರುವುದಾಗಿ ಇಲ್ಲಿಯ ನಾಗರಿಕರು ಆರೋಪಿಸಿದ್ದಾರೆ. ಸಾಕು ನಾಯಿ ಮಾಲಕರು ರಾತ್ರಿ ಹೊರ ಬಿಡುವ ಶ್ವಾನಗಳನ್ನು ಬೆಳಿಗ್ಗೆ ಕಟ್ಟಿ ಹಾಕದೆ ಇರುವುದು ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಬೆಳಿಗ್ಗೆ ಈ ದಾರಿಯಾಗಿ ಸಾಗುತ್ತಿರುವ ಮದ್ರಸ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕಾಗಿ ತೆರಳುವವರನ್ನು ಸಾಕು ನಾಯಿಗಳು ಅಟ್ಟಾಡಿಸಿ ಕಚ್ಚಿ ಗಾಯಗೊಳಿಸುತ್ತಿರುವುದಾಗಿ ದೂರಲಾಗಿದೆ.
ಈ ಪ್ರದೇಶಗಳಲ್ಲಿ ಸಾಕು ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ. ಜಿಲ್ಲೆಯಲ್ಲಿ ಬಹೇತಕ ರಸ್ತೆಗಳಲ್ಲಿ ಬೀದಿ ನಾಯಿಗಳಿಗಳಂತೆ ಸಾಕು ನಾಯಿಗಳೂ ಹೆಚ್ಚಿವೆ. ಹೆಜ್ಜೆ ಹೆಜ್ಜೆಗೂ ಗುರ್ ಎನ್ನುವ ನಾಯಿಗಳು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿವೆ. ಸಾಕು ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ. ಪಾದಚಾರಿಗಳು ಮತ್ತು ದ್ವಿ ಚಕ್ರ ವಾಹನಗಳ ಸವಾರರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ ಇಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.
ಇಲ್ಲಿರುವ ಮನೆಗಳಿಂದ ಹಾಗೂ ಸಮಾರಂಭಗಳು ನಡೆದ ಮನೆಗಳಿಂದ ತ್ಯಾಜ್ಯಕ್ಕಾಗಿ ದಿನವಿಡಿ ಹತ್ತಾರು ನಾಯಿಗಳು ಕಾಯುತ್ತಾ ಇರುತ್ತವೆ. ರಾತ್ರಿಯಲ್ಲೂ ರಸ್ತೆಗಳಲ್ಲಿಬೀಡು ಬಿಟ್ಟಿರುವ ಸಾಕು ನಾಯಿಗಳು ಕೂಡಾ ಬೈಕ್‍ಗಳ ಮೇಲೆರಗುತ್ತಿವೆ. ಬೆಳಗಿನ ಹೊತ್ತಿನಲ್ಲೂ ಕಪ್ಪು ಬಣ್ಣದ ಪ್ಲಾಸ್ಟಿಕ್‍ಗಳಲ್ಲಿ ಯಾವುದೇ ತಿಂಡಿ, ತಿನಿಸುಗಳನ್ನು ಬೈಕ್ ಹಾಗೂ ಸೈಕಲ್ ಹ್ಯಾಂಡಲ್‍ಗೆ ಹಾಕಿಕೊಂಡು ಹೋಗುತ್ತಿರುವುದು ನಾಯಿಗಳ ಕಣ್ಣಿಗೆ ಬಿದ್ದರೆ, ಅವುಗಳನ್ನು ಬಾಯಿಯಿಂದ ಕಚ್ಚಿ ಕಿತ್ತುಕೊಳ್ಳುತ್ತಿವೆ. ಕೆಲ ಬಡಾವಣೆಗಳಲ್ಲಿ ಚಿಕ್ಕಮಕ್ಕಳು ಅಂಗಡಿಗಳಿಂದ ಬಿಸ್ಕಿಟ್, ಬನ್‍ಗಳನ್ನು ತರುವುದಕ್ಕೂ ಹೆದರುತ್ತಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸಾಕು ನಾಯಿಯ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಕುಂತೂರು ಬಳಗದ ವತಿಯಿಂದ ಮಂಜೇಶ್ವರ ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ , ಪಂ. ಕಾರ್ಯದರ್ಶಿಯವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭ ಕುಂತೂರು ಬಳಗದ ನೇತಾರ ಇಬ್ರಾಹಿಂ ಕುಂತೂರು, ಹನೀಫ್ ಶಾರ್ಜಾ, ಸಾಮಾಜಿಕ ಕಾರ್ಯಕರ್ತರಾದ ಸೌಕಾತ್ ಅಕ್ಕರೆ, ಫಾರೂಕ್ ಚೆಕ್ ಪೋಸ್ಟ್, ಮಂಜೇಶ್ವರ ಗ್ರಾ. ಪಂ. ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ ಮೊದಲಾದವರು ಉಪಸ್ಥರಿದ್ದರು.