ನವದೆಹಲಿ: ಮಳೆಯಿಂದಾಗಿ ಬೆಳೆ ನಷ್ಟಗೊಂಡು ಟೊಮೆಟೊ ಬೆಲೆ ತೀವ್ರಗತಿಯಲ್ಲಿ ಏರಿಕೆಯಾಗಿರುವ ದಕ್ಷಿಣ ರಾಜ್ಯಗಳಲ್ಲಿ ಮುಂದಿನ ಎರಡು ದಿನ ಬೆಲೆ ಸ್ಥಿರವಾಗಿರಲಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಗುರುವಾರ ತಿಳಿಸಿದ್ದಾರೆ.
ಅನೇಕ ಕಡೆಗಳಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ ರೂ. 50 ರಿಂದ 106 ಇರಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಕೆಜಿ ಟೊಮೆಟೊ ಬೆಲೆ 40 ರೂ. ಇದೆ. ಇತರ ಮೆಟ್ರೋ ನಗರಗಳಲ್ಲಿ ಬೆಲೆ ಇಂದು ಹೆಚ್ಚಾಗಿದೆ. ಮುಂಬೈ , ಕೊಲ್ತತಾದಲ್ಲಿ ಕೆಜಿಗೆ ರೂ.77 ಮತ್ತು ಚೆನ್ನೈ ನಲ್ಲಿ 60 ರೂ. ಇದೆ.
ದೆಹಲಿಯಲ್ಲಿ ಟೊಮೆಟೊ ಬೆಲೆ ಸ್ಥಿರವಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದರಿಂದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಾಸ್ತವವಾಗಿ ಉತ್ಪಾದನೆ ಹೆಚ್ಚಾಗಿದೆ. ಉತ್ಪಾದನೆಯಲ್ಲಿ ಯಾವುದೇ ತೊಂದರೆ ಇಲ್ಲ. ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಚರ್ಚಿಸಲಿದೆ. ಮುಂದಿನ ಎರಡು ವಾರಗಳಲ್ಲಿ ಬೆಲೆ ಸ್ಥಿರವಾಗಿರಲಿದೆ ಎಂದು ಅವರು ತಿಳಿಸಿದರು.