ಉಪ್ಪಳ: ಸರ್ವರಿಗೂ ಆದರ್ಶಪ್ರಾಯರಾಗಿರುವ ಐ.ವಿ ಭಟ್ ಅವರು ಬ್ರಹ್ಮೆಕ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮಿಜಿಯವರ ಅಪೇಕ್ಷೆಯಂತೆ ಅನೇಕ ವರ್ಷ ಎಡನೀರು ಮಠದ ಆಡಳಿತಾಧಿಕಾರಿಯಾಗಿ, ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿ ಮಠದ ಬೆಳವಣೆಗೆಯಲ್ಲಿ ಪ್ರಮುಖಪಾತ್ರವಹಿಸಿರುವುದಾಗಿ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಮಹಾಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಜರಗಿದ ವಕೀಲ ಐ.ವಿ ಭಟ್ ಅಭಿನಂದನಾಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಖ್ಯಾತ ವೈದ್ಯ ಸಾಹಿತಿ, ಕಲಾವಿದ ಡಾ. ರಮಾನಂದ ಬನಾರಿ ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕಲೋಕಸೇವಾ ಆಯೋಗದ ಪೂರ್ವಾಧ್ಯಕ್ಷರಾದ ಶ್ರೀ ಟಿ. ಶ್ಯಾಮಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐ.ವಿ ಭಟ್ ಅವರು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮಿ ಅವರ ಕಾನೂನು ಪ್ರಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸರಳ -ಸಜ್ಜನಿಕೆಯ ಐ. ವಿ. ಭಟರು ಪ್ರಶಾಂತಿ ವಿದ್ಯಾಕೇಂದ್ರಕ್ಕೆ ಅಧ್ಯಕ್ಷರಾಗಿರುವುದು ಸಂಸ್ಥೆಗೆ ಶ್ರೀರಕ್ಷೆ ಎಂದು ತಿಳಿಸಿದರು.
ಸಂಸ್ಥೆಯ ಸಂಚಾಲಕ ಹಿರಣ್ಯಮಹಾಲಿಂಗ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ವತಿಯಿಂದ ಅಧ್ಯಕ್ಷರಾದ ಎಸ್. ವಿ ಭಟ್, ಡಾ. ಉದಯ ಕುಮಾರ್, ಪೆಲತ್ತಡ್ಕ ರಾಮಕೃಷ್ಣ ಭಟ್, ಮಾಣಿಪ್ಪಾಡಿ ನಾರಾಯಣ ಭಟ್, ಟ್ರಸ್ಟಿಗಳಾದ ಪಿ. ಸದಾಶಿವ ಭಟ್, ರಾಮಚಂದ್ರ ಭಟ್,ಶ್ರೀಕೃಷ್ಣ ಭಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಉಪಾಧ್ಯಕ್ಷ ಸಿ, ರಾಮಚಂದ್ರ ಉಪ್ಪಳ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಹಿರಣ್ಯವೆಂಕಟೇಶ್ವರಭಟ್ ಸ್ವಾಗತಿಸಿ, ವಂದಿಸಿದರು.