ಕಾಸರಗೋಡು: ಸಾರ್ವಜನಿಕ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರ ನಿಷ್ಪಕ್ಷಪಾತ ನಡೆ ಅನುಸರಿಸುತ್ತಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅವರು ಕೇರಳಾದ್ಯಂತ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಸಂಬಂಧ ಕಾಸರಗೋಡು ಮಾಲೋತ್ ಕಸಬ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನೆ ಆನ್‍ಲೈನ್ ಮೂಲಕ ನಡೆಸಿ ಮಾತನಾಡಿದರು. ರಾಜ್ಯದ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಹೊಸ ಕಟ್ಟಡಗಳ ನಿರ್ಮಾಣ ಸೇರಿದಂತೆ ಯಾವುದೇ ಕೆಲಸಗಳಲ್ಲಿ ತಾರತಮ್ಯ ತೋರದೆ ಸಮಾನವಾಗಿ ಅನುದಾನ ಹಂಚಲಾಗುವುದು. ಇದು ಸರ್ಕಾರದ ಸಾರ್ವಜನಿಕ ನೀತಿಯಾಗಿದೆ ಎಂದು ತಿಳಿಸಿದರು.
ಕಿಫ್‍ಬಿ ಧನಸಹಾಯದೊಂದಿಗೆ 3 ಕೋಟಿ ರೂ. ವೆಚ್ಚದಲ್ಲಿ £ಮಾಲೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಮೂರು ಅಂತಸ್ತುಳ್ಳ ಕಟ್ಟಡದಲ್ಲಿ 12 ತರಗತಿ ಕೊಠಡಿಗಳನ್ನು ಒಳಗೊಂಡಿದೆ. ಮಾಲೋತ್ ಕಸಬ ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಇ.ಚಂದ್ರಶೇಖರನ್ ಕಟ್ಟಡದ ಶಿಲಾಫಲಕ ಅನಾವರಣಗೊಳಿಸಿದರು. ಬಳಾಲ್ ಗ್ರಾಪಂ ಅಧ್ಯಕ್ಷ ರಾಜು ಕಟ್ಟಕ್ಕಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಜೋಮನ್ ಜೋಸೆಫ್ , ಬ್ಲಾಕ್ ಪಂ. ಸದಸ್ಯ ಶೋಬಿ ಜೋಸೆಫ್ , ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ. ಕುಮಾರನ್ , ಪಂಚಾಂಗವಾದ ಜೆಸಿ ಚಾಕೋ , ಮೋನ್ಸಿ ಜೋಯಿ, ಟಿ.ಪಿ. ತಂಬಾನ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಸಂಚಾಲಕ ಸುಬಿನ್ ಆಂಟನಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಜಿಲ್ಲೆಯಲ್ಲಿ ಶಾಲಾ ಕಟ್ಟಡಗಳ ಉದ್ಘಾಟನೆ:
ಏಕಕಾಲದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ನೂತನ ಕಟ್ಟಡ, ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡಗಳ ಉದ್ಘಾಟನೆಯನ್ನು ಆನ್‍ಲೈನ್‍ಮೂಲಕ ನೆರವೇರಿಸಿದರು.