ನವದೆಹಲಿ: ಇಂದು ಜೂನ್ 3, ವಿಶ್ವ ಸೈಕಲ್ ದಿನ. ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಫಿಟ್ ಇಂಡಿಯಾ ಚಳವಳಿ(Fit India movement) ಹೆಸರಿನಲ್ಲಿ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರ ಸೈಕಲ್ ಜಾಥಾ ಹಮ್ಮಿಕೊಂಡಿದೆ.
ಇಂದು ದೇಶಾದ್ಯಂತ 75 ಐತಿಹಾಸಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಸೈಕಲ್ ಜಾಥಾ ನಡೆಯಲಿದ್ದು, ದೆಹಲಿಯಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಸೈಕಲ್ ಸವಾರಿ ಜಾಥಾಕ್ಕೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಾಲನೆ ನೀಡಿ ಮಾತನಾಡಿದರು. ಇಂದು ವಿಶ್ವ ಸೈಕಲ್ ದಿನದಂದು ನಾವು ಪ್ರಧಾನಿ ಮೋದಿಯವರ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಬಯಸುತ್ತೇವೆ. ಫಿಟ್ ಇಂಡಿಯಾ ಆಂದೋಲನ, ಖೇಲೋ ಇಂಡಿಯಾ ಆಂದೋಲನ, ಸ್ವಚ್ಛ ಭಾರತ ಆಂದೋಲನ ಮತ್ತು ಆರೋಗ್ಯಕರ ಭಾರತ ಆಂದೋಲನ ಎಲ್ಲವನ್ನೂ ಸೈಕಲ್ ಸವಾರಿ ಮಾಡುವ ಮೂಲಕ ಸಾಧಿಸಬಹುದು. ಇದು ಮಾಲಿನ್ಯದ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ ಎಂದರು.
ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಇಂದು ವಿಶ್ವ ಸೈಕಲ್ ದಿನ, ಸಾವಿರಾರು ಜನರು ಇಲ್ಲಿ ಸೇರಿದ್ದಾರೆ, ಜನರು ಹೇಗಾದರೂ ಸೈಕಲ್ ಸವಾರಿ ಮಾಡಬೇಕು. ಅವಕಾಶ ಸಿಕ್ಕಾಗಲೆಲ್ಲ ನಾನು ಸೈಕಲ್ ತುಳಿಯುತ್ತಿರುತ್ತೇನೆ. ಸ್ವಸ್ಥ ಆರೋಗ್ಯಕರ ಭಾರತ ಮತ್ತು ನಮ್ಮ ವೈಯಕ್ತಿಕ ಜೀವನಕ್ಕೆ ಸೈಕಲ್ ಸವಾರಿ ಅತ್ಯಗತ್ಯ ಎಂದರು.
ನಂತರ ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಂಪುಟದ ಹಲವು ಸಚಿವರು ಭಾಗಿಯಾಗಿದ್ದಾರೆ.