ನವದೆಹಲಿ: ಕಾಶ್ಮೀರಿ ಪಂಡಿತರನ್ನು ಗುರಿ ಮಾಡಿ ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಇದರಿಂದ ಪಂಡಿತರು ಅನಿವಾರ್ಯವಾಗಿ ಕಣಿವೆ ತೊರೆಯುವಂತಾಗಿದೆ. ಪಂಡಿತರ ಹತ್ಯೆ ತಡೆಯಲು ಕೇಂದ್ರ ಸರ್ಕಾರವು ಕ್ರಿಯಾ ಯೋಜನೆ ರೂಪಿಸಬೇಕು. ಕಾಶ್ಮೀರ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಬಿಜೆಪಿ ವಿಫಲವಾಗಿದೆ.
ಪಂಡಿತರ ಮೇಲೆನ ದಾಳಿಯನ್ನು ಖಂಡಿಸಿ ಎಎಪಿ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ 'ಜನ ಆಕ್ರೋಶ ರ‍್ಯಾಲಿ'ಯನ್ನು ಉದ್ದೇಶಿಸಿ ಅವರು ಭಾನುವಾರ ಮಾತನಾಡಿದರು. ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
'ಪಾಕಿಸ್ತಾನವು ತನ್ನ ಕೀಳು ತಂತ್ರವನ್ನು ನಿಲ್ಲಿಸಬೇಕು ಎಂದು ಹೇಳಲು ಬಯಸುತ್ತೇನೆ. ಕಾಶ್ಮೀರವು ನಮ್ಮದು ಮತ್ತು ಅದು ಎಂದೆಂದಿಗೂ ಭಾರತದ ಭಾಗವಾಗಿಯೇ ಇರುತ್ತದೆ. ಭಾರತ ನಿರ್ಧರಿಸಿದರೆ, ಪಾಕಿಸ್ತಾನದ ಅಸ್ತಿತ್ವವೇ ಇರುವುದಿಲ್ಲ' ಎಂದು ಕೇಜ್ರಿವಾಲ್ ಹೇಳಿದರು.
ಕಾಶ್ಮೀರದಲ್ಲಿ ಹಿಂದೂಗಳನ್ನು ಗುರುತಿಸಿ ಹತ್ಯೆ ಮಾಡುವುದು ಮೇಯಲ್ಲಿ ತೀವ್ರಗೊಂಡಿತ್ತು. ತಹಶೀಲ್ದಾರ್ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದ ರಾಹುಲ್ ಭಟ್ ಅವರನ್ನು ಕಚೇರಿಯಲ್ಲಿಯೇ ಇತ್ತೀಚೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮೇ 1ರಿಂದ ಈವರೆಗೆ ಎಂಟು ಮಂದಿಯನ್ನು ಹತ್ಯೆ ಮಾಡಲಾಗಿದೆ. ಅವರಲ್ಲಿ ಮೂವರು ಪೊಲೀಸರು ಮತ್ತು ಎಂಟು ಮಂದಿ ನಾಗರಿಕರು. ಪೊಲೀಸರು ಕರ್ತವ್ಯದಲ್ಲಿ ಇಲ್ಲದ ಸಂದರ್ಭದಲ್ಲಿ ಹತ್ಯೆ ಮಾಡಲಾಗಿದೆ.
'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆಗೆ ಮಾತನಾಡುತ್ತೇನೆ. ಹತ್ಯೆಯನ್ನು ನಿಲ್ಲಿಸಲು ಕೇಂದ್ರದ ಬಳಿ ಇರುವ ಯೋಜನೆ ಏನು ಎಂಬುದನ್ನು ತಿಳಿದುಕೊಳ್ಳುತ್ತೇನೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಕೊಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಬಳಿ ಯಾವ ಯೋಜನೆಯೂ ಇಲ್ಲ. ಅವರು ಸಭೆಗಳನ್ನು ಮಾತ್ರ ಮಾಡುತ್ತಿದ್ದಾರೆ. ಹಲವು ಸಭೆಗಳು ನಡೆದಿವೆ. ಕ್ರಿಯಾ ಯೋಜನೆ ಏನು ಎಂಬುದು ಈಗ ಜನರಿಗೆ ತಿಳಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆಯನ್ನು ದೆಹಲಿಯಲ್ಲಿ ಶುಕ್ರವಾರವೂ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಮತ್ತು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಭೆಯಲ್ಲಿ ಭಾಗವಹಿಸಿದ್ದರು.
'ಪಂಡಿತರು ಜೀತದಾಳುಗಳಲ್ಲ'
4,500ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರಿಗೆ ಪ್ರಧಾನಿ ಪರಿಹಾರ ಯೋಜನೆ ಅಡಿಯಲ್ಲಿ ಕಾಶ್ಮೀರದಲ್ಲಿ ಉದ್ಯೋಗ ನೀಡಿ ಕೇಂದ್ರ ಸರ್ಕಾರವು ಪುನರ್ವಸತಿ ಕಲ್ಪಿಸಿದೆ. ಆದರೆ, ಕಾಶ್ಮೀರದಿಂದ ಹೊರಗೆ ಹೋಗಬಾರದು ಎಂದು ಷರತ್ತು ಹಾಕಲಾಗಿದೆ ಎಂದು ಕೇಜ್ರಿವಾಲ್ ಆಪಾದಿಸಿದ್ದಾರೆ.
'ಕಾಶ್ಮೀರದಿಂದ ಹೊರಗೆ ವರ್ಗಾವಣೆ ಕೋರಿದರೆ ಕೆಲಸದಿಂದ ವಜಾ ಮಾಡಲಾಗುವುದು. ನೀವು ಕಾಶ್ಮೀರದಲ್ಲಿಯೇ ಕೆಲಸ ಮಾಡಬೇಕು' ಎಂಬ ಷರತ್ತು ಕರಾರಿನಲ್ಲಿ ಇದೆ. ಈ ಕರಾರನ್ನು ರದ್ದು ಮಾಡಬೇಕು ಎಂಬುದು ಕಾಶ್ಮೀರಿ ಪಂಡಿತರ ಬೇಡಿಕೆಯಾಗಿದೆ. ಈ ಕರಾರನ್ನು ರದ್ದುಪಡಿಸಬೇಕು ಎಂದು ಇಡೀ ದೇಶವೇ ಬಯಸುತ್ತಿದೆ. ಕಾಶ್ಮೀರಿ ಪಂಡಿತರು ಜೀತದಾಳುಗಳಲ್ಲ. ಅವರು ತಮಗೆ ಇಷ್ಟ ಬಂದಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯ ಅವರಿಗೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರಧಾನಿ ಪರಿಹಾರ ಯೋಜನೆ ಅಡಿಯಲ್ಲಿ 2012ರಲ್ಲಿ ಉದ್ಯೋಗ ಪಡೆದುಕೊಂಡ ಸಾವಿರಾರು ಪಂಡಿತರು, ರಾಹುಲ್ ಭಟ್ ಹತ್ಯೆ ನಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮೂಹಿಕ ವಲಸೆಯ ಬೆದರಿಕೆಯನ್ನೂ ಅವರು ಒಡ್ಡಿದ್ದಾರೆ. ಆದರೆ, ಪಂಡಿತ ಸಮುದಾಯದ ಉದ್ಯೋಗಿಗಳನ್ನು ಕಾಶ್ಮೀರದ ಹೊರಗೆ ನಿಯೋಜಿಸುವುದಿಲ್ಲ, ಬದಲಿಗೆ ಸುರಕ್ಷಿತ ಸ್ಥಳಗಳಿಗೆ ವರ್ಗ ಮಾಡಲಾಗುವುದು ಎಂದು ಜಮ್ಮು-ಕಾಶ್ಮೀರ ಆಡಳಿತವು ಶುಕ್ರವಾರ ಸ್ಪಷ್ಟಪಡಿಸಿದೆ.
*
ಕಾಶ್ಮೀರಿ ಪಂಡಿತರಿಗೆ ಮನೆಗೆ ಮರಳುವ ಕನಸು ತೋರಿಸಲಾಯಿತು. ಆದರೆ ಈಗ ಅವರನ್ನು ಗುರಿಯಾಗಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಪಂಡಿತರ ಸಾಮೂಹಿಕ ವಲಸೆ ಆತಂಕಕಾರಿ.
-ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
*
ಕಾಶ್ಮೀರದಲ್ಲಿ ಹತ್ಯೆ ನಡೆದಾಗಲೆಲ್ಲ ಕೇಂದ್ರ ಗೃಹ ಸಚಿವರು ಉನ್ನತ ಮಟ್ಟದ ಸಭೆ ನಡೆಸುತ್ತಾರೆ. ಆದರೆ, ಕ್ರಿಯಾ ಯೋಜನೆ ಎಲ್ಲಿದೆ?
-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
*
ದೇಶದ ಜನರನ್ನು ರಕ್ಷಿಸುವುದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಕರ್ತವ್ಯವಾಗಿದೆ. ಶಾ ಅವರೇ ಖುದ್ದಾಗಿ ಕಾಶ್ಮೀರದ ನಾಗರಿಕರಿಗೆ ಭದ್ರತೆ ನೀಡಲು ಕ್ರಮ ಕೈಗೊಳ್ಳಬೇಕು.
-ಮಹೇಶ್ ತಾಪಸೆ, ಎನ್‌ಸಿಪಿ ಮುಖ್ಯ ವಕ್ತಾರ
*
ಕಾಶ್ಮೀರದಲ್ಲಿರುವ ಪಂಡಿತರು, ಡೋಗ್ರಾಗಳು ಇಲ್ಲಿಯೇ ಉಳಿದು ನಮ್ಮೊಂದಿಗೆ ಕೈಜೋಡಿಸಬೇಕು. ಶತ್ರುಗಳ ಸಂಚನ್ನು ವಿಫಲಗೊಳಿಸಬೇಕು.
-ರವಿಂದರ್ ರೈನಾ, ಜಮ್ಮು-ಕಾಶ್ಮೀರ ಬಿಜೆಪಿ ಮುಖ್ಯಸ್ಥ
*
ಇದು ಸರ್ಕಾರದ ವೈಫಲ್ಯ ಮಾತ್ರವಲ್ಲ, ಬದಲಿಗೆ ನಾಗರಿಕರ ವೈಫಲ್ಯವೂ ಹೌದು. ಇಂತಹ ಹತ್ಯೆಗಳನ್ನು ನಿಲ್ಲಿಸಲು ನಾವು ವಿಫಲರಾದರೆ ಅದಕ್ಕಿಂತ ಅವಮಾನಕರವಾದುದು ಬೇರೇನಿಲ್ಲ.
-ಅಲ್ತಾಫ್ ಬುಖಾರಿ, ಜಮ್ಮು-ಕಾಶ್ಮೀರ ಅಪ್ನಿ ಪಾರ್ಟಿ ಮುಖ್ಯಸ್ಥ