ನಾಗ್ಪುರ: ಅಲ್ಪಾವಧಿ ಕರ್ತವ್ಯದ ಸೇನಾ ನೇಮಕಾತಿ ಯೋಜನೆ 'ಅಗ್ನಿಪಥ' ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕೇಂದ್ರ ಸಚಿವ ವಿ.ಕೆ. ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಗ್ನಿಪಥ' ಯೋಜನೆ ಇಷ್ಟವಿಲ್ಲದಿದ್ದರೆ ಸಶಸ್ತ್ರ ಪಡೆಗಳಿಗೆ ಸೇರಬೇಡಿ ಎಂದು ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ವರದಿಗಾರರ ಬಳಿ ಮಾತನಾಡಿದ ಅವರು, 'ಭಾರತೀಯ ಸೇನೆ ಸೇರುವುದನ್ನು ಕಡ್ಡಾಯಗೊಳಿಸಿಲ್ಲ. ಸ್ವ ಇಚ್ಛೆಯಿಂದ ಸೇರಬಹುದು' ಎಂದು ಹೇಳಿದ್ದಾರೆ.
'ಸೇನೆ ಸೇರುವುದು ಸ್ವಯಂಪ್ರೇರಿತ. ಕಡ್ಡಾಯವಲ್ಲ. ಯಾರಾದರೂ ಆಕಾಂಕ್ಷಿಗಳು ಸೇರಬೇಕೆಂದು ಬಯಸಿದಲ್ಲಿ ಸ್ವ ಇಚ್ಛೆಯಿಂದ ಸೇರಬಹುದು. ನಾವು ಕಡ್ಡಾಯ ಮಾಡುವುದಿಲ್ಲ. ನೀವು 'ಅಗ್ನಿಪಥ' ಯೋಜನೆಯನ್ನು ಇಷ್ಟಪಡದಿದ್ದರೆ ಸಶಸ್ತ್ರ ಪಡೆಗಳನ್ನು ಸೇರಬೇಡಿ. ಸೇನೆ ಸೇರಿ ಎಂದು ನಿಮ್ಮನ್ನು ಹೇಳಿದವರು ಯಾರು? ನೀವು ಬಸ್ ಮತ್ತು ರೈಲುಗಳಿಗೆ ಬೆಂಕಿ ಹಚ್ಚುತ್ತಿದ್ದೀರಿ. ನಿಮ್ಮನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತದೆ ಎಂದು ಹೇಳಿದವರಾರು? ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮಾತ್ರ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ' ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.
'ಅಗ್ನಿಪಥ' ಯೋಜನೆ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ವಿರುದ್ಧವೂ ಅವರು ಕಿಡಿಕಾರಿದ್ದಾರೆ.