ಕಾಸರಗೋಡು: ಬೇಸಿಗೆ ರಜಾ ನಂತರ ಶಾಲೆ, ಅಂಗನವಾಡಿಗಳು ಪುನರಾರಂಭಗೊಳ್ಳುವ ಮಧ್ಯೆ ಮಳೆಗಾಲದ ರೋಗಗಳು ವ್ಯಾಪಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾಕ್ಟರ್ ಎ ವಿ ರಾಮದಾಸ್ ತಿಳಿಸಿದ್ದಾರೆ.
ಮಳೆಗಾಲದ ಆರಂಭದೊಂದಿಗೆ ಜಿಲ್ಲೆಯ ವಿವಿಧ ವಲಯಗಳಲ್ಲಿ ಸೊಳ್ಳೆಜನ್ಯ, ಜಲಜನ್ಯ ರೋಗ ವ್ಯಾಪಕವಾಗತೊಡಗಿದೆ. ಶಾಲೆ, ಅಂಗನವಾಡಿ ವಠಾರ ಶುಚಿಗೊಳಿಸುವುದರ ಜತೆಗೆ ಸೊಳ್ಳೆಗಳ ಮೂಲ ನಾಶಪಡಿಸಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆಗಾಗಿ ನೀರಿನ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಿ ಕೊಡಲು ಆಯಾ ಸಂಸ್ಥೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಬಳಕೆಯ ಎಲ್ಲಾ ಬಾವಿಗಳು ಆರೋಗ್ಯ ಕಾರ್ಯಕರ್ತರ ಮೇಲ್ನೋಟದೊಂದಿಗೆ ಕಡ್ಡಾಯವಾಗಿ ಕ್ಲೋರಿನೇಶನ್ ಮಾಡಬೇಕಾಗಿದೆ. ಓವರ್ ಹೆಡ್ ಟ್ಯಾಂಕ್‍ಗಳು ಮತ್ತು ಇತರ ಸಂಗ್ರಹಾಗಾರವನ್ನು ತೊಳೆದು ಸ್ವಚ್ಛಗೊಳಿಸುವಲ್ಲೂ ಗಮನಹರಿಸಬೇಕು.
ಕೊರೊನಾದಂತಹ ಮಾರಕ ರೋಗ ಸಂಪೂರ್ಣವಾಗಿ ದೂರಾಗದ ಹಿನ್ನೆಲೆಯಲ್ಲಿ ಸುರಕ್ಷಾ ಮಾನದಂಡಗಳನ್ನು ಅನುಸರಿಸಲು ಶಿಕ್ಷಕರು, ವಿದ್ಯಾರ್ಥಿಗಳು ಗಮನಹರಿಸಬೇಕು. ಶಿಕ್ಷಕರು ಮತ್ತು ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಹನ್ನೆರಡು ವಯಸ್ಸಿನ ಮೇಲಿನ ಮಕ್ಕಳಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಸ್ವೀಕರಿಸಲು ರಕ್ಷಕರು ಮತ್ತು ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಗತ್ಯ ಪೂರ್ವಭಾವಿ ಕ್ರಮ ತೆಗೆದುಕೊಳ್ಳುವುದರ ಜತೆಗೆ ಮಕ್ಕಳ ಆರೋಗ್ಯಪೂರ್ಣ ಅಧ್ಯಯನ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.