ಕಾಸರಗೋಡು: ಜಿಲ್ಲೆಯ ಅಜಾನೂರಿನಲ್ಲಿ ಮೀನುಗಾರಿಕಾ ಬಂದರಿನ ನಿರ್ಮಾಣ ಹಿನ್ನೆಲೆಯಲ್ಲಿ ಬಂದರು ಇಲಾಖೆ ಕೇಂದ್ರ ತಂಡ ಅಜಾನೂರು ಕಡಪ್ಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೋಧನೆ ನಡೆಸಿತು. ಪೂನಾದ ಸೆಂಟ್ರಲ್ ವಾಟರ್ ಆ್ಯಂಡ್ ಪವರ್ ರಿಸರ್ಚ್ ಸ್ಟೇಷನ್ (ಸಿಡಬ್ಲ್ಯು.ಪಿ.ಆರ್.ಎಸ್) ಅಧಿಕಾರಿಗಳ ಈ ತಂಡ ಎರಡನೇ ಬಾರಿಗೆ ಅಜಾನೂರ್ ಕಡಲತೀರದಲ್ಲಿ ಅಧ್ಯಯನ ನಡೆಸಿದೆ. ನಿಗದಿತ ಬಂದರು ನಿರ್ಮಾಣ ಸ್ಥಳದ ಸಮೀಪವಿರುವ ಸಮುದ್ರದ ಆಳ ಮತ್ತು ವಂದರು ನಿರ್ಮಾಣಕ್ಕಿರುವ ಸ್ಥಳದ ಸನ್ನಿವೇಶ ಮತ್ತು ಸಾಧ್ಯತೆಗಳ ಸಮಗ್ರ ಅಧ್ಯಯನ ನಡೆಸಲಾಯಿತು. ಎರಡು ತಿಂಗಳೊಳಗೆ ಅಧ್ಯಯನ ವರದಿ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಅಧ್ಯಯನ ವರದಿ ಮತ್ತು ಪೆÇ್ರಜೆಕ್ಟ್ ವರದಿಗಳನ್ನು ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಮುಖ್ಯ ಇಂಜಿನಿಯರ್‍ಗೆ ಸಲ್ಲಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಂತಿಮ ಅನುಮತಿಯ ನಂತರ ಯೋಜನೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಸಿ.ಡಬ್ಲ್ಯೂ.ಪಿ.ಆರ್.ಎಸ್ ಅಧಿಕಾರಿಗಳಾದ ಬೂರಾ ಕೃಷ್ಣ, ಡಾ. ಎ.ಕೆ.ಸಿಂಗ್, ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ, ಬಂದರು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‍ಗಳಾದ ಲತಾ, ಸುನೀಶ್, ಸಹಾಯಕ ಎಂಜಿನಿಯರ್‍ಗಳಾದ ನಿಧಿನ್, ರಾಜೇಶ್, ಅಭಿವೃದ್ಧಿಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಮೀನ ಮುಂತಾದವರು ಜತೆಗಿದ್ದರು.