ನ್ಯೂಯಾರ್ಕ್: ಕೋರ್ಟ್ನಲ್ಲಿ ವಿಡಿಯೋ ಮಾಡಲು ಅಡ್ಡಿಉಂಟು ಮಾಡಿದ್ದರಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಕೋರ್ಟ್ ಆವರಣ ಹಾಗೂ ನ್ಯಾಯಮೂರ್ತಿಗಳ ಕೊಠಡಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಿರಲೆ ಬಿಟ್ಟು ಎಲ್ಲರನ್ನೂ ಸುಸ್ತು ಮಾಡಿದ್ದಾನೆ.
ಈ ಘಟನೆ ನಡೆದಿರುವುದು ಅಮೆರಿಕದ ನ್ಯೂಯಾರ್ಕ್ನಲ್ಲಿ. ಮೊನ್ನೆ ಕೋರ್ಟ್ ಕಲಾಪವನ್ನು ಏಕಾಏಕಿ ಸ್ಥಗಿತಗೊಳಿಸಲಾಯಿತು. ಕೋರ್ಟ್ಗೆ ರಜೆ ಘೋಷಿಸಲಾಯಿತು. ಇದ್ದಕ್ಕಿದ್ದಂತೆಯೇ ಈ ಕೋರ್ಟ್ನಲ್ಲಿ ಏಕೆ ಇಂಥ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಎಲ್ಲರಿಗೂ ಅಚ್ಚರಿ ಉಂಟಾಯಿತು. ಯಾರೋ ಮೃತಪಟ್ಟಿರಬಹುದು ಎಂದೂ ಊಹಿಸಲಾಯಿತು. ಆದರೆ ಕಾರಣವನ್ನು ಮಾತ್ರ ಬಹಿರಂಗಗೊಳಿಸಿರಲಿಲ್ಲ.
ಕೊನೆಗೆ ತಿಳಿದದ್ದು ಏನೆಂದರೆ, ಕೋರ್ಟ್ನ ತುಂಬೆಲ್ಲಾ ಜಿರಳೆಗಳು ಬಂದು ಎಲ್ಲರಿಗೂ ಕಾಟ ಕೊಡುತ್ತಿದೆ ಎಂದು! ಏಕಾಏಕಿ ಇಷ್ಟು ಜಿರಳೆಗಳು ಹೇಗೆ ಬಂದವು ಎಂದು ತನಿಖೆ ಮಾಡಿದಾಗ ಈ ಭೂಪ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿ ಪರಿಶೀಲನೆ ಮಾಡಿದಾಗ ಈತ ಕೋರ್ಟ್ ಆವರಣದೊಳಗೆ ಬ್ಯಾಗ್ ಒಂದರಿಂದ ಜಿರಳೆಗಳನ್ನು ಬಿಟ್ಟಿರುವುದು ಕಂಡುಬಂದಿದೆ.
ಆಗಿದ್ದೇನು?
ಭೂ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಇದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಶುರು ಮಾಡಿದ. ವಿಚಾರಣೆಗೆ ಒಳಗಾದವರು ಇವನ ವಿರೋಧಿಗಳಾಗಿದ್ದರಿಂದ ಅವರ ಮರ್ಯಾದೆ ತೆಗೆಯುವ ಉದ್ದೇಶದಿಂದ ವಿಡಿಯೋ ಮಾಡಲು ಶುರು ಮಾಡಿದ.
ಆದರೆ ಕೋರ್ಟ್ ಆವರಣದಲ್ಲಿ ಇದಕ್ಕೆ ಅವಕಾಶ ಇರದ ಹಿನ್ನೆಲೆಯಲ್ಲಿ ಆತನನ್ನು ಹೊರಕ್ಕೆ ಕಳಿಸಲಾಯಿತು. ಇದೇ ಸಿಟ್ಟಿನಿಂದ ಈತ ಈ ಕೃತ್ಯ ಎಸಗಿದ್ದ. ನಂತರ ಕೀಟನಾಶಕದವರನ್ನು ಕರೆಯಿಸಿ ಕೋರ್ಟ್ ತುಂಬೆಲ್ಲಾ ಕೀಟನಾಶಕ ಸಿಂಪಡಣೆ ಮಾಡಿಸಿ ಜಿರಲೆಗಳನ್ನು ಸಾಯಿಸಲಾಯಿತು ಎಂದು ವರದಿಯಾಗಿದೆ.