ಇದರ ಬಗ್ಗೆ ಭಾರಿ ಚರ್ಚೆಯಾಗುತ್ತಲೇ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲಿದ್ದಾರೆ. ಜಾರಿ ನಿರ್ದೇಶನಾಲಯ ಎದುರು ಏನನ್ನೂ ಮುಚ್ಚಿಡುವ ಅಗತ್ಯ ನಮ್ಮ ನಾಯಕರಿಗೆ ಇಲ್ಲ. ಅವರಿಂದ ಏನೂ ತಪ್ಪಾಗಲಿಲ್ಲ, ಹೀಗಿದ್ದ ಮೇಲೆ ಮುಚ್ಚಿಡೋಕೆ ಏನಿದೆ? ಅವರು ಜಾರಿ ನಿರ್ದೇಶನಲಾಯದ ಮುಂದೆ ಬಂದು ಎಲ್ಲವನ್ನೂ ಸ್ಪಷ್ಟಪಡಿಸಲಿದ್ದಾರೆ ಎಂದಿದೆ. ಇವರನ್ನು ನೋಡಿ ಬಿಜೆಪಿ ಕಲಿಯಬೇಕಿದೆ ಎಂದೂ ಹೇಳಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಇವರಿಬ್ಬರಿಗೆ ಜಾರಿ ನಿರ್ದೇಶನಾಲಯ ಇದೇ 1ರಂದು ನೋಟಿಸ್ ಜಾರಿಗೊಳಿಸಿತ್ತು. ಜೂನ್ 2ರಂದು ವಿಚಾರಣೆಗೆ ಹಾಜರಾಗುವಂತೆ ಅದರಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಜೂನ್ 8ರ ಗಡುವು ನೀಡಲಾಗಿತ್ತು.
ನೋಟಿಸ್ ಜಾರಿಯಾದ ಮಾರನೆಯ ದಿನ ಸೋನಿಯಾ ಗಾಂಧಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದಾಗಿ ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ತಿಳಿಸಿದ್ದರು. ಅವರು ಕ್ವಾರಂಟೈನ್ನಲ್ಲಿ ಇರಬೇಕಿರುವ ಕಾರಣ, ಇ.ಡಿ ಮುಂದೆ ಹಾಜರಾಗುವುದಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ವಿದೇಶಕ್ಕೆ ಹೋದವರು, ಅವಧಿ ಮುಗಿದರೂ ಮರಳಿರಲಿಲ್ಲ. ಇದುವರೆಗೂ ಅವರು ವಿದೇಶದಲ್ಲಿಯೇ ಇರುವ ಕಾರಣ, ಜೂನ್ 13ರವರೆಗೆ ಸಮಯ ಕೇಳಿದ್ದಾರೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?
ಜವಾಹರಲಾಲ್ ನೆಹರು ಮತ್ತು ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.
2010ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದರು. ಈ ಕಂಪೆನಿಯು ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.
ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2 ಸಾವಿರ ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ರಾಹುಲ್ ಮತ್ತು ಸೋನಿಯಾ ಅವರಿಗೆ ನೋಟಿಸ್ ಜಾರಿ ಮಾಡಿ ಖುದ್ದು ಹಾಜರಿಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಕರೊನಾ ಕಾಣಿಸಿಕೊಂಡಿದೆ.