ನವದೆಹಲಿ :ವಿಚ್ಛೇದಿತ ಮಹಿಳೆಗೆ ತನ್ನ ಸೋದರನಿಂದ ಹಣಕಾಸು ನೆರವಿನ ಅಗತ್ಯವಿರುವಾಗ ಆಕೆಯ ಸಂಕಷ್ಟಗಳಿಗೆ ಆತ ಮೂಕಪ್ರೇಕ್ಷಕನಾಗಿರುವಂತಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ. ವಯಸ್ಸಾದ ತಮ್ಮ ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ ಎಂದು ಎತ್ತಿಹಿಡಿದ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ವಿವಾಹ ವಿಚ್ಛೇದಿತ ಮಹಿಳೆಯೋರ್ವಳು,ಮಾಜಿ ಪತಿಯ ವಿಚ್ಛೇದಿತ ಸೋದರಿಯನ್ನು ಅವಲಂಬಿತೆ ಎಂದು ಪರಿಗಣಿಸುವಂತಿಲ್ಲ ಎಂದು ಮಂಡಿಸಿದ್ದ ವಾದವನ್ನು ನ್ಯಾಯಾಲಯವು ತಳ್ಳಿಹಾಕಿತು.
ತನ್ನ ಅಭಿಪ್ರಾಯದಲ್ಲಿ,ಭಾರತದಲ್ಲಿ ಒಡಹುಟ್ಟಿದವರ ನಡುವಿನ ಸಂಬಂಧ ಮತ್ತು ಪರಸ್ಪರರ ಮೇಲಿನ ಅವರ ಅವಲಂಬನೆ ಯಾವಾಗಲೂ ಹಣಕಾಸು ಸ್ವರೂಪದ್ದಾಗಿರದೇ ಇರಬಹುದು. ಆದರೆ ಪುರುಷ ಅಥವಾ ಮಹಿಳೆ ಅಗತ್ಯ ಸಮಯದಲ್ಲಿ ತನ್ನ ಒಡಹುಟ್ಟಿದವರನ್ನು ತೊರೆಯುವುದಿಲ್ಲ ಅಥವಾ ಕಡೆಗಣಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ ನ್ಯಾ.ಸ್ವರ್ಣಕಾಂತಾ ಶರ್ಮಾ ಅವರು,ಭಾರತೀಯ ಸಂಸ್ಕೃತಿಯು ಕುಟುಂಬ ಸದಸ್ಯರ ನಡುವೆ ಒಗ್ಗಟ್ಟನ್ನು ಪ್ರತಿಪಾದಿಸುತ್ತದೆ ಎಂದರು.
ಕುಟುಂಬದ ಸದಸ್ಯರು ಪರಸ್ಪರ ಹಂಚಿಕೊಳ್ಳುವ ಪ್ರೀತಿಯು ವಾತ್ಸಲ್ಯ ಬಂಧಗಳಾಗಿ ಅಂತ್ಯಗೊಳ್ಳುತ್ತವೆ ಮತ್ತು ಕುಟುಂಬ ಸದಸ್ಯರು ಪರಸ್ಪರರಿಗೆ ಅತ್ಯಂತ ಬಲವಾದ ಬೆಂಬಲ ವ್ಯವಸ್ಥೆಯಾಗಿರುತ್ತಾರೆ ಎಂದು ಹೇಳಿದ ನ್ಯಾ.ಶರ್ಮಾ,ನಿರ್ದಿಷ್ಟವಾಗಿ ಸೋದರ ಮತ್ತು ಸೋದರಿ ನಡುವಿನ ಸಂಬಂಧ ಪರಸ್ಪರರ ಬಗ್ಗೆ ಗಾಢವಾದ ಕಾಳಜಿಯನ್ನು ಹೊಂದಿರುತ್ತದೆ. ಭಾರತದಲ್ಲಿ ಹಬ್ಬಗಳು, ರೂಢಿಗಳು ಮತ್ತು ಸಂಪ್ರದಾಯಗಳು ಪರಸ್ಪರರತ್ತ ಒಡಹುಟ್ಟಿದವರ ಕಾಳಜಿ,ಪ್ರೀತಿ ಮತ್ತು ಹೊಣೆಗಾರಿಕೆಯ ದೃಢೀಕರಣ ಮತ್ತು ಗುರುತಿಸುವಿಕೆಯಾಗಿವೆ ಎಂದು ಹೇಳಿದರು.
ತನ್ನ ಮಾಜಿ ಪತಿಯಿಂದ ಹೆಚ್ಚಿನ ಜೀವನಾಂಶ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯವು,ಸದ್ರಿ ವ್ಯಕ್ತಿಯು 79 ವರ್ಷ ಪ್ರಾಯದ ಅವಲಂಬಿತ ತಂದೆ, ವಿಚ್ಛೇದಿತ ಸೋದರಿ, ತನ್ನ ಎರಡನೇ ಪತ್ನಿ ಮತ್ತು ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾನೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು.
ವಿಚ್ಛೇದಿತ ಸಹೋದರಿ ತನ್ನ ಮಾಜಿ ಪತಿಯಿಂದ ಜೀವನಾಂಶವನ್ನು ಪಡೆಯುತ್ತಿದ್ದಾಳೆ ಎಂಬ ಅಂಶದ ಬಗ್ಗೆ ಯಾವುದೇ ಸಂದೇಹವಿಲ್ಲ,ಆದರೆ ಆಕೆಯ ಸಂಕಷ್ಟಗಳಿಗೆ ಮತ್ತು ಆಕೆಗೆ ತನ್ನ ನೆರವಿನ ಅಗತ್ಯವಿದ್ದಾಗ ಸೋದರ ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ತನ್ನ ಒಡಹುಟ್ಟಿದವಳನ್ನು ಬೆಂಬಲಿಸಲು ಆತ ತನ್ನ ವೆಚ್ಚಗಳ ಪಟ್ಟಿಯಲ್ಲಿ ಅವಕಾಶವನ್ನು ಕಲ್ಪಿಸಬೇಕಾಗುತ್ತದೆ ಎಂದು ಹೇಳಿದ ನ್ಯಾಯಾಲಯವು,ತಮ್ಮ ಇಳಿವಯಸ್ಸಿನಲ್ಲಿ ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ. ಪ್ರತಿವಾದಿಯ ತಂದೆಗೆ ಯಾವುದೇ ಆದಾಯವಿಲ್ಲ. ಹೀಗಾಗಿ ಜೀವನಾಂಶವನ್ನು ನಿರ್ಧರಿಸುವಾಗ ತಂದೆಯನ್ನು ನೋಡಿಕೊಳ್ಳುವ ವೆಚ್ಚವನ್ನೂ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿತು.
ಪ್ರತಿಯೊಂದೂ ಪ್ರಕರಣದಲ್ಲಿ ಸಂಬಂಧಗಳನ್ನು ಗಣಿತೀಯ ಸೂತ್ರಗಳಲ್ಲಿ ಬಂಧಿಸುವಂತಿಲ್ಲ ಮತ್ತು ಪ್ರತಿಯೊಂದೂ ಪ್ರಕರಣವನ್ನು ಅದರ ವಿಶೇಷ ಮತ್ತು ವಿಲಕ್ಷಣ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದ ಉಚ್ಚ ನ್ಯಾಯಾಲಯವು ಅಂತಿಮವಾಗಿ ಅರ್ಜಿದಾರ ಮಹಿಳೆಯ ಜೀವನಾಂಶವನ್ನು ಮಾಸಿಕ 6,000 ರೂ.ಗಳಿಂದ 7,500 ರೂ.ಗಳಿಗೆ ಹೆಚ್ಚಿಸಿತು.