HEALTH TIPS

ಪ್ರವಾದಿ ನಿಂದನೆಗೆ ವಿಶ್ವದಾದ್ಯಂತ ಖಂಡನೆ: ಇಬ್ಬರು ವಕ್ತಾರರನ್ನು ವಜಾ ಮಾಡಿದ ಬಿಜೆಪಿ

  ನವದೆಹಲಿಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ಹೇಳಿಕೆಗಳಿಗಾಗಿ ಬಿಜೆಪಿ ರವಿವಾರ ನೂಪುರ್ ಶರ್ಮಾರನ್ನು ಪಕ್ಷದ ವಕ್ತಾರ ಹುದ್ದೆಯಿಂದ ಅಮಾನತುಗೊಳಿಸಿದೆ ಮತ್ತು ಇನ್ನೋರ್ವ ವಕ್ತಾರ ನವೀನ್ ಕುಮಾರ್ ಜಿಂದಾಲ್ ರನ್ನು ಉಚ್ಚಾಟನೆಗೊಳಿಸಿದೆ.

ಈ ಹೇಳಿಕೆಗಳು ಭಾರೀ ಆಕ್ರೋಶ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದ್ದವು. ಯಾವುದೇ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನವನ್ನು ತಾನು ಬಲವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ಹೇಳಿದೆ.

ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಪ್ರತಿಯೊಂದೂ ಧರ್ಮವು ವಿಕಸನಗೊಂಡು ಪ್ರವರ್ಧಮಾನಕ್ಕೆ ಬಂದಿದೆ. ಬಿಜೆಪಿ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನವನ್ನು ಬಿಜೆಪಿಯು ಬಲವಾಗಿ ಖಂಡಿಸುತ್ತದೆ. ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಯಾವದೇ ಸಿದ್ಧಾಂತವನ್ನೂ ಬಿಜೆಪಿಯು ಬಲವಾಗಿ ವಿರೋಧಿಸುತ್ತದೆ. ಇಂತಹ ಜನರನ್ನು ಅಥವಾ ಸಿದ್ಧಾಂತವನ್ನು ಬಿಜೆಪಿಯು ಉತ್ತೇಜಿಸುವುದಿಲ್ಲ ಎಂದು ಪಕ್ಷವು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

'ಭಾರತೀಯ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ತನ್ನ ಆಯ್ಕೆಯ ಯಾವುದೇ ಧರ್ಮವನ್ನು ಆಚರಿಸುವ ಮತ್ತು ಯಾವುದೇ ಧರ್ಮವನ್ನು ಗೌರವಿಸುವ ಹಕ್ಕನ್ನು ನೀಡಿದೆ. ಭಾರತವು ತನ್ನ ಸ್ವಾತಂತ್ರದ 75ನೇ ವರ್ಷವನ್ನು ಆಚರಿಸುತ್ತಿರುವಾಗ ಅದನ್ನು ಎಲ್ಲರೂ ಸಮಾನರಾಗಿರುವ, ಪ್ರತಿಯೊಬ್ಬರೂ ಘನತೆಯಿಂದ ಬದುಕುವ,ಎಲ್ಲರೂ ದೇಶದ ಏಕತೆ ಮತ್ತು ಸಮಗ್ರತೆಗೆ ಬದ್ಧರಾಗಿರುವ ಮತ್ತು ಎಲ್ಲರೂ ಬೆಳವಣಿಗೆ ಮತ್ತು ಅಭಿವೃದ್ಧಿಯ ಫಲವನ್ನು ಆನಂದಿಸುವ ಮಹಾನ್ ದೇಶವನ್ನಾಗಿಸಲು ನಾವು ಬದ್ಧರಾಗಿದ್ದೇವೆ 'ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೇಳಿಕೆಯ ಬೆನ್ನಲ್ಲೇ ವಿಚಾರಣೆ ಬಾಕಿಯಿರುವಂತೆ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿ ಮತ್ತು ಜಿಂದಾಲ್ರನ್ನು ಉಚ್ಚಾಟಿಸಿ ಬಿಜೆಪಿಯು ಆದೇಶಗಳನ್ನು ಹೊರಡಿಸಿದೆ. ಶರ್ಮಾ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರೆ ಜಿಂದಾಲ್ ಪಕ್ಷದ ದಿಲ್ಲಿ ಮಾಧ್ಯಮ ಘಟಕದ ಮುಖ್ಯಸ್ಥರಾಗಿದ್ದರು. ಕಳೆದ ವಾರ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿಯವರನ್ನು ಅವಮಾನಿಸಿ ಶರ್ಮಾರ ಹೇಳಿಕೆಯು ಮುಸ್ಲಿಮ್ ಗುಂಪುಗಳಿಂದ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ವಿವಾದವು ತೀವ್ರಗೊಳ್ಳುತ್ತಿದ್ದಂತೆ ಜಿಂದಾಲ್ ಪ್ರವಾದಿಯವರ ಕುರಿತು ಟ್ವೀಟಿಸಿದ್ದು ಸಹ ಹಲವರನ್ನು ಸಿಟ್ಟಿಗೆಬ್ಬಿಸಿತ್ತು ಮತ್ತು ಇದು ಟ್ವೀಟ್ ಅನ್ನು ಅಳಿಸುವುದನ್ನು ಅವರಿಗೆ ಅನಿವಾರ್ಯವಾಗಿಸಿತ್ತು.

ವಿವಾದಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಶುಕ್ರವಾರ ಉ.ಪ್ರದೇಶದ ಕಾನ್ಪುರದಲ್ಲಿ ಬಂದ್ ಕರೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದಿದ್ದು,20 ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ 36 ಜನರನ್ನು ಬಂಧಿಸಲಾಗಿದ್ದು,1,500 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಶರ್ಮಾರ ಹೇಳಿಕೆಗಾಗಿ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ತಾನು ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿರುವ ಶರ್ಮಾ,ತನಗೆ ಜೀವ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಭಾರತದ ಆಡಳಿತಾರೂಢ ಪಕ್ಷದ ವಕ್ತಾರರ ಹೇಳಿಕೆಗಳ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ ಎದ್ದಿರುವ ಸಿಟ್ಟಿನ ಅಲೆಯು ಟ್ರೆಂಡಿಂಗ್ ಹ್ಯಾಷ್ಟ್ಯಾಗ್ ಗಳೊಂದಿಗೆ ಮತ್ತು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಿಸಿರುವ ದಿನವೇ ಬಿಜೆಪಿಯ ಈ ಸ್ಪಷ್ಟೀಕರಣ ಹೊರಬಿದ್ದಿದೆ.

ಪ್ರಕರಣದ ಬಗ್ಗೆ ಸಾಮಾಜಿಕ ತಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಲವಾರು ಗಲ್ಫ್‌ ನಾಗರಿಕರು ಮತ್ತು ಗಣ್ಯ ವ್ಯಕ್ತಿಗಳು ಈ ಬಗ್ಗೆ ಬಲವಾದ ಖಂಡನೆ ವ್ಯಕ್ತಪಡಿಸಿದ್ದರು. ಭಾರತೀಯ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆಯೂ ಕರೆ ನೀಡಲಾಗಿತ್ತು. ಈ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದೆ. ಈ ನಡುವೆ, ಈ ಹೇಳಿಕೆಗೆ ಅವಕಾಶ ನೀಡಿದ ಸುದ್ದಿವಾಹಿನಿ ಮತ್ತು ಅದರ ನಿರೂಪಕಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ಸಾಮಾಜಿಕ ತಾಣದಲ್ಲಿ ವ್ಯಕ್ತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries