ಕಣ್ಣೂರು: ಮೂವರು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲೆಯ ಪಾಣೂರು ಪ್ರದೇಶದ ಧಾರ್ಮಿಕ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕ ಮತ್ತು 22 ವರ್ಷದ ವಿದ್ಯಾರ್ಥಿಯನ್ನು ಪೊಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದೆ.
ಶನಿವಾರ ವಿದ್ಯಾರ್ಥಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಸೋಮವಾರ ಶಿಕ್ಷಕನನ್ನು ಬಂಧಿಸಿ ತಲಶ್ಶೇರಿಯ ಉಪ ನ್ಯಾಯಾಲಯದ ಆದೇಶದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದು ಪಾಣೂರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ಸಂತ್ರಸ್ತರ ಪೋಷಕರು ಈ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದರು. ವಿದ್ಯಾರ್ಥಿಯನ್ನು ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಿಂದ ಬಂಧಿಸಲಾಗಿದ್ದು, ಶಿಕ್ಷಕನನ್ನು ತಮಿಳುನಾಡಿನ ತಿರುಚ್ಚಿಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಸಿಗೆ ರಜೆ ಬಳಿಕ ಶಾಲೆಗೆ ತೆರಳಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಈ ಸಂದರ್ಭ ಪೋಷಕರು ತಮ್ಮ ಮಕ್ಕಳನ್ನು ವಿಚಾರಿಸಿದಾಗ ಅವರು ಅನುಭವಿಸಿದ ದೌರ್ಜನ್ಯದ ಬಗ್ಗೆ ಹೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಿರುಕುಳಕ್ಕೊಳಗಾದವರು 12-14 ವರ್ಷದೊಳಗಿನ ಬಾಲಕರಾಗಿದ್ದು, ರಜೆಗೆ ತೆರಳುವ ಮೊದಲು ಎರಡು ತಿಂಗಳ ಹಿಂದೆ ಅವರ ಮೇಲೆ ದೌರ್ಜನ್ಯ ನಡೆದಿದೆ.