ಮಂಜೇಶ್ವರ: ರಾ. ಹೆದ್ದಾರಿ ಅಗಲೀಕರಣದ ಭಾಗವಾಗಿ ಗಡಿ ಭಾಗಗಳಲ್ಲಿ ಕಾಮಗಾರಿಯನ್ನು ಅಂತಿಮ ಹಂತಕ್ಕೆ ತಲುಪಿಸಲಿರುವ ಕಾಮಗಾರಿ ಭಾರೀ ಬಿರುಸಿನಿಂದ ಸಾಗುತಿದ್ದು, ಸರ್ವೀಸ್ ರಸ್ತೆಯ ಭಾಗವಾಗಿ ಒಳ ರಸ್ತೆಗಳಿಗೆ ಸಾಗುವ ದಾರಿಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿದೆ.
ಇದರಂತೆ ತೂಮಿನಾಡಿನಿಂದ ಕಣ್ಟತೀರ್ಥ ರಸ್ತೆಗೆ ಸಾಗುವ ರಸ್ತೆಯನ್ನು ಮುಚ್ಚುಗಡೆಗೊಳಿಸಿ ಫಲಕ ಹಾಕಿದಾಗ ಎಚ್ಚೆತ್ತುಕೊಂಡ ಸ್ಥಳೀಯ ನಾಗರೀಕರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟಿಸಿ ಮೊದಲು ಸ್ಥಳೀಯರಿಗೆ ವಾಹನ ಹಾಗೂ ಕಾಲ್ನಡಿಗೆಯಲ್ಲಿ ಸಾಗುವ ರಸ್ತೆಯ ವ್ಯವಸ್ಥೆ ಮಾಡಿದ ನಂತರ ಕಾಮಗಾರಿ ಮುಂದುವರಿಸಿ ಎಂದು ತಾಕೀತು ನೀಡಿದ್ದಾರೆ. ಇದಕ್ಕೆ ಸ್ವಂಧಿಸಿದ ಉಸ್ತುವಾರಿ ಅಧಿಕಾರಿಗಳು ಕೂಡಲೇ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಅಂಡರ್ ಪಾಸ್ ಸೌಕರ್ಯ ಮಾಡಿ ಕೊಡುವುದಾಗಿ ಮಂಜೇಶ್ವರ ಶಾಸಕರ ಭರವಸೆಯ ಮಾತುಗಳು ಸ್ಥಳಿಯರ ನೆಮ್ಮದಿಗೆ ಕಾರಣವಾದರೂ ದಿನಾಂಕವನ್ನು ಮುಂದೂಡುತ್ತಿರುವುದು ಅಸಮಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಟೀಕಾಪ್ರಹಾರ ಕೂಡಾ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಹೋರಾಟದ ಹಾದಿಯನ್ನು ಹಿಡಿಯಲು ಶಾಸಕರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆದಿರುವುದಾಗಿ ತಿಳಿದು ಬಂದಿದೆ. ಸಂತೋಷ್ ನಗರ, ಏರಿಯಾಲ್, ಮೊಗ್ರಾಲ್ ಪುತ್ತೂರು, ಪೆರುವಾಡ್ ಸೇರಿದಂತೆ 15 ಸ್ಥಳಗಳಲ್ಲಿ ಲಘು ವಾಹನಗಳು ಮತ್ತು ಪ್ರಯಾಣಿಕರಿಗಾಗಿ ಮಿನಿ ಅಂಡರ್‍ಪಾಸ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗುತ್ತಿಗೆದಾರರಾದ ಯುಎಲ್‍ಸಿಸಿಯ ಪಿಆರ್‍ಒ ತಿಳಿಸಿದ್ದಾರೆ.