ತಿರುವನಂತಪುರ: ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರಿಗೆ ಧರ್ಮಗುರುವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಈ ಹಿಂದೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲು ವೇದಿಕೆ ಸಜ್ಜಾಗಿದೆ ಎಂದು ಚರ್ಚ್‌ನ ಮೂಲಗಳು ಭಾನುವಾರ ಹೇಳಿವೆ.
ಕೇರಳದ ನ್ಯಾಯಾಲಯದ ತೀರ್ಪನ್ನು ವ್ಯಾಟಿಕನ್ ಅಂಗೀಕರಿಸಿದೆ ಎಂದೂ ತಿಳಿಸಿದೆ.
ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಫ್ರಾಂಕೊ ಅವರನ್ನು ಕೇರಳ ಪೊಲಿಸರು ವಿಚಾರಣೆಗೆ ಒಳಪಡಿಸಿದ ಕಾರಣಕ್ಕೆ 2018 ಸೆಪ್ಟೆಂಬರ್‌ನಲ್ಲಿ ಅವರನ್ನು ಧರ್ಮಪ್ರಾಂತ್ಯದ ಜವಾಬ್ದಾರಿಗಳಿಂದ ಪೋಪ್ ಅವರು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿದ್ದರು.
ಜಲಂಧರ್‌ನ ಧರ್ಮಪ್ರಾಂತ್ಯಕ್ಕೆ ಶನಿವಾರ ಭೇಟಿ ನೀಡಿದ್ದ ಫ್ರಾಂಕೊ ಅವರಿಗೆ ಆರ್ಚ್ ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಅವರು ವ್ಯಾಟಿಕನ್‌ನ ತೀರ್ಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.