ಕಾಸರಗೋಡು: ಮನೆ ಕೆಲಸದ ಭರವಸೆಯೊಂದಿಗೆ ಕುವೈತ್‍ಗೆ ಸಾಗಿಸಲಾದ ಯುವತಿಯರಲ್ಲಿ ಮಾಣವ ಕಳ್ಳಸಾಗಾಟಗಾರರ ಕೈಯಲ್ಲಿ ಸಿಲುಕಿಕೊಂಡವರಲ್ಲಿ ಹಲವು ಮಂದಿ ಕೇರಳೀಯ ಯುವತಿಯರು ಒಳಗೊಂಡಿದ್ದಾರೆ. ಇವರೆಲ್ಲರೂ ಭಾರತೀಯ ರಾಯಭಾರ ಕೇಂದ್ರದಲ್ಲಿ ಆಶ್ರಯಪಡೆದುಕೊಂಡಿದ್ದಾರೆ. ಇವರನ್ನು ಭಾರತಕ್ಕೆ ಕಳುಹಿಸಿಕೊಡುವ ಪ್ರಯತ್ನ ನಡೆದುಬರುತ್ತಿರುವುದಾಗಿ ಮಾಹಿತಿಯಿದೆ.
ಮನೆಕೆಲಸದ ನೆಪದಲ್ಲಿ ಕೇರಳದಿಂದ ಹಲವು ಮಂದಿ ಯುವತಿಯರನ್ನು ಕೊಚ್ಚಿ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ನೇಮಕಾತಿ ಸಂಸ್ಥೆಯೊಂದು ಕಳುಹಿಸಿದ್ದು, ಅಲ್ಲಿಂದ ಇವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‍ಗೆ ಹಸ್ತಾಂತರಿಸುವ ಬಗ್ಗೆ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್.ಐ.ಎ)ಗೂ ಮಾಹಿತಿ ಲಭಿಸಿತ್ತು. ವಿದೇಶದಲ್ಲಿ ಮನೆಕೆಲಸಕ್ಕೆ ಯುವತಿಯರು ಬೇಕಾಗಿದ್ದು, 50ಸಾವಿರ ರೂ. ವರೆಗೆ ವೇತನ ನೀಡುವುದಾಗಿ ಜಾಹೀರಾತು ನೀಡಿ ಯುವತಿಯರನ್ನು ರಿಕ್ರೂಟ್ ಮಾಡಲಾಗುತ್ತಿದೆ. ಗಲ್ಫ್ ರಾಷ್ಟ್ರ ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಮಜೀದ್ ಎಂಬಾತ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭಿಸಿದ್ದು, ಈತನ ಪತ್ತೆಗೆ ಬಲೆ ಬೀಸಿದೆ. ಇತ್ತೀಚೆಗೆ ಮಾವೇಲಿಕ್ಕರ ನಿವಾಸಿ ಯುವತಿಯನ್ನು ಕುವೈತ್‍ಗೆ ತಲುಪಿಸಿ, ಅಲ್ಲಿಂದ ಸಿರಿಯಾಕ್ಕೆ ರವಾನಿಸಿದೆ. ತಂಡದ ವಶದಲ್ಲಿದ್ದ ಈ ಯುವತಿ ತಪ್ಪಿಸಿ ಊರಿಗೆ ಬಂದಿದ್ದು, ಬೆಚ್ಚಿಬೀಳಿಸುವ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡಿದ್ದಾಳೆ. ಈಕೆಯ ಜತೆಗೆ ಮುಂಬೈ, ಮಂಗಳೂರು, ಕೊಯಂಬತ್ತೂರು ಮೂಲದ ಯುವತಿಯರಿದ್ದು, ಇವರಲ್ಲಿ ಮುಂಬೈ ಮೂಲದ ಯುವತಿ ಜತೆಗೆ ಒಂದೇ ಕೊಠಡಿಯಲ್ಲಿ ಕಳೆಯುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಳು. ಮಾನವ ಕಳ್ಳಸಾಗಾಟ ದಂಧೆಯ ಪ್ರಮುಖ ಸೂತ್ರಧಾರ ಹಾಗೂ ಐಸಿಸ್ ನೇಮಕಾತಿ ಏಜೆಂಟ್ ಮಜೀದ್ ಪ್ರಸಕ್ತ ಕುವೈತ್‍ನಲ್ಲಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.