ನವದೆಹಲಿ: ಡಿಜಿಟಲ್ ಕ್ಷೇತ್ರದ ಪ್ರಗತಿ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಸೈಬರ್ ಭದ್ರತೆ ಆಂತರಿಕ, ದೇಶದ ರಕ್ಷಣೆಗೆ ಪೂರಕವಾಗಿವೆ. ಕೆಲ ದೇಶಗಳು ಮೂಲಸೌಲಭ್ಯವನ್ನು ಅಸ್ಥಿರಗೊಳಿಸಲು ಸೈಬರ್ ಪಡೆ ರಚಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ನವದೆಹಲಿ: ಡಿಜಿಟಲ್ ಕ್ಷೇತ್ರದ ಪ್ರಗತಿ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಸೈಬರ್ ಭದ್ರತೆ ಆಂತರಿಕ, ದೇಶದ ರಕ್ಷಣೆಗೆ ಪೂರಕವಾಗಿವೆ. ಕೆಲ ದೇಶಗಳು ಮೂಲಸೌಲಭ್ಯವನ್ನು ಅಸ್ಥಿರಗೊಳಿಸಲು ಸೈಬರ್ ಪಡೆ ರಚಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಸೈಬರ್ ಸುರಕ್ಷತೆ, ರಾಷ್ಟ್ರೀಯ ಭದ್ರತೆ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಸೋಮವಾರ ಮಾತನಾಡಿದ ಅವರು, 'ಡಿಜಿಟಲ್ ತಂತ್ರಜ್ಞಾನ ಹೆಚ್ಚಿನ ಜನರನ್ನು ತಲುಪುತ್ತಿದ್ದು, ಸಂಬಂಧಿತ ಪರಿಣತರು ಹಾಗೂ ಆಡಳಿತಕ್ಕೆ ಸೈಬರ್ ಭದ್ರತೆ ನೀಡುವುದೇ ಸವಾಲಾಗಿದೆ' ಎಂದರು.
ಸೈಬರ್ ಭದ್ರತೆಯು ದೇಶದ ದೃಷ್ಟಿಯಿಂದ ನಿರ್ಣಾಯಕ. ಡಿಜಿಟಲ್ ತಂತ್ರಜ್ಞಾನವು ಇಂದು ಕೆಳಹಂತದವರೆಗೂ ತಲುಪಿದೆ. ಸೈಬರ್ ಭದ್ರತೆ ನೀಡದೇ ಇದ್ದರೆ ಅದು ಪ್ರಗತಿಯ ಮೇಲೂ ಪರಿಣಾಮ ಬೀರಲಿದೆ ಎಂದರು.
ರಾಷ್ಟ್ರೀಯ ಭದ್ರತೆ ಮತ್ತು ಸೈಬರ್ ಭದ್ರತೆ ನಡುವೆ ಸಂಪರ್ಕವಿದೆ. ದೇಶದ ಪ್ರಗತಿ ಸಹಿಸದವರು ಸೈಬರ್ ದಾಳಿ ನಡೆಸುತ್ತಾರೆ. ಹೀಗಾಗಿ, ಲೋಪಕ್ಕೆ ಎಡೆಇಲ್ಲದಂತಹ ಭದ್ರತೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು, ಸವಾಲುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಡಿಜಿಟಲ್ ಚಟುವಟಿಕೆಯು ತೀವ್ರಗತಿಯಲ್ಲಿ ಏರುತ್ತಿದೆ ಎಂದ ಅವರು, 2021-22ನೇ ಸಾಲಿನಲ್ಲಿ ಯುಪಿಐ ವಹಿವಾಟು ಮೊತ್ತ ಒಂದು ಟ್ರಿಲಿಯನ್ ಡಾಲರ್ ದಾಟಿದೆ. ಡಿಜಿಟಲ್ ವಹಿವಾಟು ನಡೆಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಸೈಬರ್ ಸೇವೆಯ ದುರ್ಬಳಕೆ ಹೊಸದಲ್ಲ. ವೈರಸ್ ದಾಳಿ, ಡಾಟಾ ಕಳವು, ಆನ್‌ಲೈನ್ ಆರ್ಥಿಕ ವಂಚನೆ ಸೇರಿ ಹಲವು ಅಪರಾಧಗಳನ್ನು ಜನರು ಗಮನಿಸಿದ್ದಾರೆ. 2012ರಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 3,377 ಇದ್ದರೆ, 2020ರಲ್ಲಿ 50 ಸಾವಿರಕ್ಕೆ ಏರಿದೆ ಎಂದರು.
ವಾಸ್ತವ ಸ್ಥಿತಿಯು ಹೀಗಿರುವಾಗ ಸೈಬರ್ ಭದ್ರತೆ ಒದಗಿಸಲು ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಹೇಳಿದರು.