ಉಪ್ಪಳ: ಕಯ್ಯಾರು ಪರಂಬಳ - ಜೋಡುಕಲ್ಲು ರಸ್ತೆಯ ದುರವಸ್ಥೆಯನ್ನು ಪ್ರತಿಭಟಿಸಿ ಕೆಥೋಲಿಕ್ ಸಭಾ ಕಯ್ಯಾರು ಘಟಕದ ನೇತೃತ್ವದಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.
ಕಯ್ಯಾರು ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಬಿ ಶೆಟ್ಟಿ, ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ಹ್ಯಾರಿ ಡಿ ಸೋಜ, ಪೈವಳಿಕೆ ಪಂಚಾಯತಿ ಸದಸ್ಯರಾದ ಝೆಡ್. ಎ ಕಯ್ಯಾರ್, ಅಶೋಕ್ ಭಂಡಾರಿ, ಅವಿನಾಶ್ ಮಚಾದೋ ಹಾಗೂ ಬಿ. ಎ ಬಶೀರ್, ಪಿ.ಟಿ.ಎ ಅಧ್ಯಕ್ಷ ಚಿದಾನಂದ ಮಯ್ಯ, ಪದ್ಮನಾಭ ಕಯ್ಯಾರ್, ಪಂಚಾಯತಿ ಮಾಜಿ ಸದಸ್ಯ ಪ್ರಸಾದ್ ರೈ ಮೊದಲಾದವರು ಮಾತನಾಡಿದರು. ಬಿ. ಎ ಖಾದರ್, ಜೋರ್ಜ್ ಡಿ ಅಲ್ಮೇಡಾ ಮೊದಲಾದವರು ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ಕಯ್ಯಾರ್ ಘಟಕ ದ ಅಧ್ಯಕ್ಷ ಪ್ರವೀಣ್ ಪ್ರಕಾಶ್ ಕ್ರಾಸ್ತ ವಂದಿಸಿದರು. ರೋಶನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು
ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿ ಕ್ರಷರ್ ಮಾಲಕರಿಗೆ ಅಲ್ಲದೆ ಪೈವಳಿಕೆ ಗ್ರಾಮ ಪಂಚಾಯತಿ ಕಾರ್ಯದರ್ಶಿಯವರಿಗೂ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ, ಶಾಸಕರು, ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಅಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ವರ್ಷಗಳಿಂದ ಈ ರಸ್ತೆಯೂ ಸಂಪೂರ್ಣ ಹದೆಗೆಟ್ಟಿದ್ದು, ಇದರಿಂದ ಸಂಚಾರ ನರಕಮಯವಾಗಿದೆ. ಈ ರಸ್ತೆ ಮೂಲಕ ದಿನಂಪ್ರತಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಸಂಚಾರ ನಡೆಸುತ್ತಿದ್ದು, ಶಾಲೆ, ಚರ್ಚ್, ದೇವಸ್ಥಾನ, ಮಸೀದಿ ಸೇರಿದಂತೆ ಸಾರ್ವಜನಿಕ ಕೇಂದ್ರಗಳಿದ್ದು, ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿದೆ.
ಆದರೆ ರಸ್ತೆಯ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಿಂಚಿತ್ತೂ ಗಮನ ಹರಿಸಿಲ್ಲ . ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಜಲ್ಲಿಗಳನ್ನು ಸಮೀಪದ ಕ್ರಷರ್ ನಿಂದ ಬೃಹತ್ ಗಾತ್ರದ ರಸ್ತೆಯಾಗಿ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಇಂತಹ ಲಾರಿಗಳು ನಿರಂತರ ಸಂಚಾರ ನಡೆಸುವುದರಿಂದ ರಸ್ತೆ ಬೃಹತ್ ಹೊಂಡಗಳಾಗಿ ಪರಿಣಮಿಸಿದೆ.