ಕಾಸರಗೋಡು: ಕೋವಿಡ್ ಮಹಾಮಾರಿಯ ಬಳಿಕ ಜೂನ್ ತಿಂಗಳ ಒಂದರಂದು ಎರಡು ವರ್ಷಗಳ ಬಳಿಕ ಮೊದಲ ಬಾರಿ ಬೇಸಿಗೆ ರಜಾ ಅವಧಿಯೂ ಮುಗಿದು ಕೇರಳಾದ್ಯಂತ ಇಂದು ಶೈಕ್ಷಣಿಕ ಸಂಸ್ಥೆಗಳು ತೆರೆದುಕೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶಾಲಾ ತರಗತಿಗಳು ಸಮರ್ಪಕವಾಗಿ ತೆರೆದುಕೊಳ್ಳದೆ, ಆನ್‍ಲೈನ್ ತರಗತಿಗಷ್ಟೆ ಸೀಮಿತವಾಗಿತ್ತು. ಕಾಸರಗೋಡು ಜಿಲ್ಲಾದ್ಯಂತ ಶಾಲೆಗಳನ್ನು ಮಕ್ಕಳ ಆಗಮನಕ್ಕಾಗಿ ಶುಚೀಕರಿಸಿ ಸಜ್ಜುಗೊಳಿಸಲಾಗಿದೆ.
ಶಾಲೆ, ಅಂಗನವಾಡಿಗಳು ಪುನರಾರಂಭಗೊಳ್ಳುವ ಮಧ್ಯೆ ಮಳೆಗಾಲದ ರೋಗಗಳು ವ್ಯಾಪಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾಕ್ಟರ್ ಎ ವಿ ರಾಮದಾಸ್ ತಿಳಿಸಿದ್ದಾರೆ. ಶಿಕ್ಷಕರು ಮತ್ತು ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಹನ್ನೆರಡು ವಯಸ್ಸಿನ ಮೇಲಿನ ಮಕ್ಕಳಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಸ್ವೀಕರಿಸಲು ರಕ್ಷಕರು ಮತ್ತು ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಗತ್ಯ ಪೂರ್ವಭಾವಿ ಕ್ರಮ ತೆಗೆದುಕೊಳ್ಳುವುದರ ಜತೆಗೆ ಮಕ್ಕಳ ಆರೋಗ್ಯಪೂರ್ಣ ಅಧ್ಯಯನ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.