ನವದೆಹಲಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾದಿ ಸರ್ಕಾರ ಪತನದೊಂದಿಗೆ ಇದೀಗ ಮತ್ತೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ರಾಜಸ್ಥಾನ, ಛತ್ತೀಸ್ ಗಢದಲ್ಲಿ ಮಾತ್ರ ತನ್ನ ಸ್ವಂತ ಸಾಮರ್ಥ್ಯದೊಂದಿಗೆ ಆಡಳಿತ ನಡೆಸುತ್ತಿದ್ದು, ಜಾರ್ಖಂಡ್ ನಲ್ಲಿ ಜೆಎಂಎಂ ಮತ್ತು ಆರ್ ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಇದೇ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ್, ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮಹಾರಾಷ್ಟ್ರದಲ್ಲಿನ ಬೆಳವಣಿಗೆ ಮತ್ತಷ್ಟು ಹೊಡೆತ ನೀಡಿದೆ.
ಉತ್ತರಾಖಂಡ್, ಗೋವಾ ಮತ್ತು ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾದ ಕಾಂಗ್ರೆಸ್, ಪಂಜಾಬ್ ನಲ್ಲೂ ಅಧಿಕಾರ ಕಳೆದುಕೊಂಡಿತು.
ಕಳೆದ ವರ್ಷ ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಚುನಾವಣೆಯಲ್ಲೂ ಕಳಪೆ ಪ್ರದರ್ಶನ ತೋರಿದ ಕಾಂಗ್ರೆಸ್ ತಮಿಳುನಾಡಿನಲ್ಲಿ ಮೈತ್ರಿ ಪಕ್ಷ ಡಿಎಂಕೆಯೊಂದಿಗೆ ಗೆಲುವು ಸಾಧಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದರೂ ಅಲ್ಲಿನ ಸರ್ಕಾರದಲ್ಲಿ ಸೇರಿಲ್ಲ.
ಕಳೆದ ಕೆಲವು ತಿಂಗಳುಗಳಲ್ಲಿ ಮಾಜಿ ಕೇಂದ್ರ ಸಚಿವರಾದ ಅಶ್ವನಿ ಕುಮಾರ್, ಆರ್ ಪಿಎನ್ ಸಿಂಗ್, ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಕರ್, ಗುಜರಾತ್ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಪಕ್ಷ ತೊರೆದಿದ್ದು, ಕರ್ನಾಟಕ, ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಆದಂತೆ ಮಹಾರಾಷ್ಟ್ರದಲ್ಲೂ ಬಂಡಾಯ ಶಾಸಕರಿಂದ ಸರ್ಕಾರ ಪತನವಾಗಿರುವುದಾಗಿ ಕಾಂಗ್ರೆಸ್ ಪಕ್ಷದೊಳಗಿನ ಮುಖಂಡರು ಹೇಳುತ್ತಿದ್ದಾರೆ.
ಮುಂಬರುವ ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಮರ್ಪಕ ರೀತಿಯಲ್ಲಿ ಪಕ್ಷ ಸಂಘಟನೆ ಹಾಗೂ ನಿರ್ವಹಣೆ ಮಾಡದಿದ್ದಲ್ಲಿ ಈ ರಾಜ್ಯಗಳನ್ನೂ ಕಳೆದುಕೊಳ್ಳುವಲ್ಲಿ ಅಚ್ಚರಿಪಡಬೇಕಾಗಿಲ್ಲ.